ಎಸ್ಸೆಸ್ಸೆಫ್ ನಿಂದ ‘ಭಯೋತ್ಪಾದನೆ ವಿರುದ್ಧ ಜಿಹಾದ್’ ಜನಾಂದೋಲನ ಜ.30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಘೋಷಣೆ
ಮಂಗಳೂರು, ಜ.28: ಉಗ್ರವಾದಿ ಚಟುವಟಿಕೆಗಳು ಆತಂಕಕಾರಿಯಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಶನ್(ಎಸ್ಸೆಸ್ಸೆಫ್)ನಿಂದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ‘ಭಯೋತ್ಪಾದನೆ ವಿರುದ್ಧ ಜಿಹಾದ್’ ಎಂಬ ಹೆಸರಿನಲ್ಲಿ ಜನಾಂದೋಲನ ನಡೆಯಲಿದೆ. ಇದರ ಘೋಷಣೆಯನ್ನು ಜ.30 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಮಾಡಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಉಗ್ರವಾದಿ ಚಟುವಟಿಕೆಗಳನ್ನು ನಿಯಂತ್ರಿಸಲು ಕಾನೂನು ಕ್ರಮಗಳಷ್ಟೆ ಸಾಕಾಗುತ್ತಿಲ್ಲ. ಯುವಕರನ್ನು ಬ್ರೈನ್‌ವಾಶ್ ಮಾಡಿ ಉಗ್ರವಾದಿ ಚಟು ವಟಿಕೆಗಳಿಗೆ ತೊಡಗಿಸಿಕೊಳ್ಳುವ ಪ್ರಯತ್ನ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಯುವಮನಸ್ಸುಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಯುವ ಜನರಲ್ಲಿ ಧಾರ್ಮಿಕ ವೌಲ್ಯಗಳನ್ನು, ಮಾನವೀಯ ಭೋಧನೆಗಳನ್ನು ಹಾಗೂ ಅಹಿಂಸಾ ಮನೋಭಾವನೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಎಸ್ಸೆಸ್ಸೆಫ್ ಸಂಘಟನೆಯ ಶಾಖೆಗಳು ಹಾಗೂ ಮಸೀದಿ, ಮದ್ರಸಗಳಲ್ಲಿ ಭಯೋತ್ಪಾದನೆಯ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮ, ಸಾರ್ವಜನಿಕ ಸಭೆ, ಸೆಮಿನಾರ್ ಹಾಗೂ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗುವುದು ಎಂದವರು ಹೇಳಿದರು.
ಜಾಗತಿಕ ಮಟ್ಟದಲ್ಲಿ ಕುಖ್ಯಾತವಾಗಿರುವ ಐಸಿಸ್ ಭಯೋತ್ಪಾದಕ ಸಂಘಟನೆಯು ಇಸ್ಲಾಮಿನ ಹೆಸರು ಬಳಸುತ್ತಿದ್ದರೂ ಇಸ್ಲಾಮಿನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಅದರ ಕಾರ್ಯಾಚರಣೆಗಳು ಇಸ್ಲಾಮಿಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದು, ನಿರಪರಾಗಳನ್ನು ಕೊಲ್ಲುವ ಮತ್ತು ಮುಸ್ಲಿಮರು ಗೌರವದಿಂದ ಕಾಣುವ ದರ್ಗಾಗಳನ್ನು ಕೆಡವುವ ಕೃತ್ಯಗಳು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ. ಭಯೋತ್ಪಾದನೆಯನ್ನು ಇಸ್ಲಾಮಿ ನೊಂದಿಗೆ ನಂಟುಹಾಕುವ ಷಡ್ಯಂತ್ರ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭಯೋತ್ಪಾದನೆಯ ಬಗೆಗಿನ ಇಸ್ಲಾಮಿನ ಸಿದ್ಧಾಂತವನ್ನು ಜನಾಂದೋಲನದಲ್ಲಿ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗು ವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪ್ರ.ಕಾರ್ಯದರ್ಶಿ ಎಂ.ಬಿ.ಮುಹಮ್ಮದ್ ಸ್ವಾದಿಕ್, ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಹಾಫಿಳ್ ಯಅ್ಕೂಬ್ ಸಅದಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ವಿ.ಯು.ಝಹ್‌ರಿ ಉಪಸ್ಥಿತರಿದ್ದರು.







