ತಮಿಳುನಾಡಿನಲ್ಲಿ 3 ವಿದ್ಯಾರ್ಥಿನಿಯರ ಆತ್ಮಹತ್ಯೆ
ಎಬಿವಿಪಿ ಪ್ರತಿಭಟನೆ
ಹಾಸನ, ಜ.28: ತಮಿಳುನಾಡಿನ ಯೋಗ ವೈದ್ಯಕೀಯ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ಕೂಡಲೇ ಸೂಕ್ತವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಡೈರಿ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ, ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಪರವಾಗಿ ಘೋಷಣೆ ಕೂಗಿದ ವಿದ್ಯಾರ್ಥಿಗಳು, ತಮಿಳುನಾಡಿನ ವಿಳ್ಳಪುರಂ ಎಸ್.ವಿ.ಎಸ್. ಯೋಗ ವೈದ್ಯಕೀಯ ಕಾಲೇಜಿನ ಮೂರು ಜನ ವಿದ್ಯಾರ್ಥಿನಿಯರು ಆಡಳಿತ ಮಂಡಳಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ನೀಡುವಂತೆ ಕಿರುಕುಳ ನೀಡಲಾಗುತ್ತಿದ್ದ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾಯ್ದೆ ಜಾರಿಗೆ ತರಬೇಕು ಎಂದು ಘೋಷಣೆ ಕೂಗಲಾಯಿತು.
ಕಾಲೇಜಿನ ದುರಾಡಳಿತದಿಂದ ಶುಲ್ಕದ ವಿರುದ್ಧ ಹೋರಾಟ ಮಾಡಲಾಗುತ್ತಿದ್ದ ಕಿರುಕುಳ ತಾಳಲಾರದೆ ಸರಣ್ಯಾ, ಪ್ರಿಯಾಂಕಾ ಹಾಗೂ ಮೋನಿಶಾ ಎಂಬ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಆತ್ಮಹತ್ಯೆಯು ಇಂದಿನ ಖಾಸಗಿ ಶಿಕ್ಷಣ ವ್ಯವಸ್ಥೆಯ ಹಣ ಬಾಕತನ ಪ್ರದರ್ಶಿಸುತ್ತದೆ ಎಂದು ದೂರಿದ ಅವರು, ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಕರ್ತರಾದ ಸಂಸ್ಥೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ೈರಿ ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿದ್ದರಿಂದ ನಾಲ್ಕು ಮುಖ್ಯ ರಸ್ತೆಗಳ ವಾಹನಗಳ ಸಂಚಾರ ಸ್ಥಗಿತಗೊಂಡು ಅವ್ಯವಸ್ಥೆ ಉಂಟಾಯಿತು. ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ರಾಜೇಶ್ ಗುರಾಣಿ ಮತ್ತಿತರ ವಿದ್ಯಾರ್ಥಿ ಮುಖಂಡರು ಉಪಸ್ಥಿತರಿದ್ದರು.





