ಯಮನ್‌ನಲ್ಲಿ ಅಪಹೃತ 3 ಸಿಬ್ಬಂದಿ ಬಿಡುಗಡೆ: ಅಲ್-ಜಝೀರ
ದೋಹಾ, ಜ. 28: ಯಮನ್‌ನ ಹಿಂಸಾಗ್ರಸ್ತ ಟಾಯೆಝ್ ನಗರದಲ್ಲಿ ಅಪಹರಣಕ್ಕೊಳಗಾದ ತನ್ನ ಮೂವರು ಸಿಬ್ಬಂದಿಯನ್ನು 10 ದಿನಗಳಿಗೂ ಅಧಿಕ ಅವಧಿಯ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಅಲ್-ಜಝೀರ ಗುರುವಾರ ಹೇಳಿದೆ.
ಬಂಡುಕೋರರು ಮತ್ತು ಯಮನ್ ಅಧ್ಯಕ್ಷ ಮನ್ಸೂರ್ ಹದಿಗೆ ನಿಷ್ಠರಾಗಿರುವ ಕೊಲ್ಲಿ ಬೆಂಬಲಿತ ಪಡೆಗಳ ನಡುವಿನ ಸಂಘರ್ಷವನ್ನು ವರದಿ ಮಾಡುತ್ತಿದ್ದ ವೇಳೆ ಜನವರಿ 18ರಂದು ವರದಿಗಾರ ಹಮೀದ್ ಅಲ್ ಬುಖಾರಿ, ಕ್ಯಾಮರಾಮನ್ ಅಬ್ದುಲ್ಲಝೀಝ್ ಅಲ್-ಸಾಬ್ರಿ ಮತ್ತು ಚಾಲಕ ಮುನೀರ್ ಅಲ್-ಸುಬೇಯ್ ನಾಪತ್ತೆಯಾಗಿದ್ದರು.
‘‘ಅಜ್ಞಾತ ಬಂದೂಕುಧಾರಿ’’ಗಳಿಂದ ಅಪಹರಣಕ್ಕೊಳಗಾದ ಬಳಿಕ ‘‘ಸ್ವಲ್ಪ ಸಮಯದ ಹಿಂದೆ’’ ತನ್ನ ಮೂವರು ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅಲ್-ಜಝೀರ ಗುರುವಾರ ಬೆಳಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.
ಇರಾನ್ ಬೆಂಬಲಿತ ಶಿಯಾ ಹುದಿ ಬಂಡುಕೋರರು ತನ್ನನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು ಎಂಬುದಾಗಿ ವರದಿಗಾರ ಹಮೀದ್ ತನ್ನ ಫೇಸ್‌ಬುಕ್ ಪುಟದಲ್ಲಿ ಸಂದೇಶವೊಂದನ್ನು ಹಾಕಿದ್ದಾರೆ. ಬಂಡುಕೋರರ ವಿರುದ್ಧ ಸೌದಿ ನೇತೃತ್ವದ ಮಿತ್ರ ಪಕ್ಷ ವಾಯು ದಾಳಿ ನಡೆಸುತ್ತಿದೆ. ಅಲ್-ಜಝೀರದ ಪ್ರಧಾನ ಕಚೇರಿ ಇರುವ ಬಹರೈನ್ ಮಿತ್ರ ಪಕ್ಷದ ಸದಸ್ಯ ದೇಶವಾಗಿದೆ.





