ಐಸಿಸಿ ಅಂಡರ್-19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ

ಮೀರ್ಪುರ(ಬಾಂಗ್ಲಾದೇಶ), ಜ.28: ಐಸಿಸಿ ಅಂಡರ್-19 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಕ್ರಿಕೆಟ್ ಶಿಶು ಐರ್ಲೆಂಡ್ ತಂಡವನ್ನು 79 ರನ್‌ಗಳ ಅಂತರದಿಂದ ಮಣಿಸಿರುವ ಭಾರತ ಶುಭಾರಂಭ ಮಾಡಿದೆ.
ಗುರುವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸರ್ಫ್‌ರಾಝ್ ಖಾನ್(74) ಹಾಗೂ ವಾಷಿಂಗ್ಟನ್ ಸುಂದರ್(62) ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.
ಭಾರತ 55 ರನ್‌ಗೆ 4 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಒಂದಾದ ಈ ಜೋಡಿ 5ನೆ ವಿಕೆಟ್‌ಗೆ 17.2 ಓವರ್‌ಗಳಲ್ಲಿ 110 ರನ್ ಜೊತೆಯಾಟ ನಡೆಸಿ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 268 ರನ್ ಗಳಿಸಲು ನೆರವಾಯಿತು.
ಗೆಲ್ಲಲು ಕಠಿಣ ಸವಾಲು ಪಡೆದ ಐರ್ಲೆಂಡ್ ತಂಡ ಲಾರ್ಕನ್ ಟಕರ್(57) ಹಾಗೂ ವಿಲಿಯಮ್ ಮೆಕ್‌ಕ್ಲಿನ್‌ಟಕ್(58) ಬಾರಿಸಿದ ಅರ್ಧಶತಕದ ಹೊರತಾಗಿಯೂ 49.1 ಓವರ್‌ಗಳಲ್ಲಿ 189 ರನ್‌ಗೆ ಆಲೌಟಾಯಿತು.
269 ರನ್ ಬೆನ್ನಟ್ಟಿದ ಐರ್ಲೆಂಡ್ 4ನೆ ಓವರ್‌ನಲ್ಲಿ ಆರಂಭಿಕ ದಾಂಡಿಗರಾದ ಜಾಕ್ ಟೆಕ್ಟರ್(1) ಹಾಗೂ ಸ್ಟೆಫನ್ ಡೊಹೆನಿ(4) ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಇಬ್ಬರು ದಾಂಡಿಗರು ಕ್ರಮವಾಗಿ ಅರ್ಮಾನ್ ಜಾಫರ್ ಹಾಗೂ ನಾಯಕ ಐಶಾನ್ ಕಿಶನ್‌ಗೆ ರನೌಟಾದರು.
ಐರ್ಲೆಂಡ್ 16.2 ಓವರ್‌ಗಳಲ್ಲಿ 46 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆಗ 5ನೆ ವಿಕೆಟ್‌ಗೆ 113 ರನ್ ಜೊತೆಯಾಟ ನಡೆಸಿದ ಟಕರ್(57) ಹಾಗೂ ವಿಲಿಯಮ್(58) ತಂಡವನ್ನು ಆಧರಿಸಿದ್ದರು. ಈ ಜೋಡಿಯನ್ನು ಝೀಶಾನ್ ಅನ್ಸಾರಿ ಬೇರ್ಪಡಿಸಿದರು. ಆವೇಶ್ ಖಾನ್, ಹ್ಯಾರಿ ಟೆಕ್ಟರ್(3) ವಿಕೆಟ್ ಕಬಳಿಸಿದಾಗ ಐರ್ಲೆಂಡ್ ಸ್ಕೋರ್ 6 ವಿಕೆಟ್‌ಗಳ ನಷ್ಟಕ್ಕೆ 165. ಆ ನಂತರ ಕುಸಿತದ ಹಾದಿ ಹಿಡಿದ ಐರ್ಲೆಂಡ್ 189 ರನ್‌ಗೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರ್
ಭಾರತ ಅಂಡರ್-19 ತಂಡ: 50 ಓವರ್‌ಗಳಲ್ಲಿ 268/9
(ಸರ್ಫ್‌ರಾಝ್ ಖಾನ್ 74, ವಿ.ಸುಂದರ್ 62, ಜೆ.ಲಿಟಲ್ 3-52, ಆ್ಯಂಡರ್ಸ್ 3-35)
ಐರ್ಲೆಂಡ್ ಅಂಡರ್-19 ತಂಡ: 49.1 ಓವರ್‌ಗಳಲ್ಲಿ 189 ರನ್‌ಗೆ ಆಲೌಟ್
(ಮೆಕ್‌ಕ್ಲಿನ್‌ಟಕ್ 58, ಟಕರ್ 57, ರಾಹುಲ್ ಬಾಥಮ್ 3-15, ಆವೇಶ್ ಖಾನ್ 2-24, ಲಾಮ್ರರ್ 2-28)







