ಶಿಶುವನ್ನು ಹೊತ್ತ ವಾಯು ಆ್ಯಂಬುಲೆನ್ಸ್ ಪತನ: 5 ಸಾವು
ಅಸ್ಟಾನ (ಕಝಕಿಸ್ತಾನ್), ಜ. 28: ಕಝಕಿಸ್ತಾನದಲ್ಲಿ ಲ್ಯುಕೇಮಿಯದಿಂದ ಬಳಲುತ್ತಿದ್ದ ಹೆಣ್ಣು ಶಿಶುವೊಂದನ್ನು ವಾಯು ಆ್ಯಂಬುಲೆನ್ಸ್ ಹೆಲಿಕಾಪ್ಟರೊಂದರಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲ ಐವರು ಮೃತಪಟ್ಟಿದ್ದಾರೆ ಎಂದು ದೇಶದ ತುರ್ತು ಸಚಿವಾಲಯ ಗುರುವಾರ ಹೇಳಿದೆ.
ಹೆಲಿಕಾಪ್ಟರ್ ದಕ್ಷಿಣ ಕಝಕಿಸ್ತಾನದ ಅಲ್ಮಾಟಿ ವಲಯದಲ್ಲಿ ಸ್ಥಳೀಯ ಸಮಯ ಬುಧವಾರ ಸಂಜೆ 5 ಗಂಟೆ ಹೊತ್ತಿಗೆ ನಾಪತ್ತೆಯಾಗಿತ್ತು. ಪೈಲಟ್, ಓರ್ವ ವೈದ್ಯ, ನರ್ಸ್, ಮಗು ಮತ್ತು ಮಗುವಿನ ತಾಯಿಯ ಮೃತದೇಹಗಳು ಗುರುವಾರ ಪತ್ತೆಯಾಗಿವೆ.
ಎರಡು ತಿಂಗಳ ಹೆಣ್ಣು ಶಿಶುವನ್ನು ಸೋಮವಾರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಮಗುವಿನಲ್ಲಿ ಲ್ಯುಕೇಮಿಯದ ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆ ವಲಯದ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಸಾಗಿಸಲಾಗುತ್ತಿತ್ತು.
Next Story





