ಇರಾನ್‌ಗೆ ಹಾರಾಟ ಪುನಾರಂಭ: ಐರೋಪ್ಯ ವಿಮಾನ ಕಂಪೆನಿಗಳ ಒಲವು
ಟೆಹರಾನ್, ಜ. 28: ಸುಮಾರು ಐದು ವರ್ಷಗಳ ಬಳಿಕ ಹಲವಾರು ಯುರೋಪಿಯನ್ ವಿಮಾನಯಾನ ಕಂಪೆನಿಗಳು ಇರಾನ್ ಪ್ರಯಾಣವನ್ನು ಪುನಾರಂಭಿಸಲಿವೆ ಎಂದು ಇರಾನ್‌ನ ಸರಕಾರಿ ಒಡೆತನದ ಪತ್ರಿಕೆ ‘ಇರಾನ್’ ವರದಿ ಮಾಡಿದೆ.
ವಿಮಾನ ಹಾರಾಟವನ್ನು ಪುನಾರಂಭಿಸುವ ಬಗ್ಗೆ ಚರ್ಚಿಸಲು ಬ್ರಿಟಿಷ್ ಏರ್‌ವೇಸ್ ಅಧಿಕಾರಿಗಳು ಮಂಗಳವಾರ ಟೆಹರಾನ್‌ಗೆ ಭೇಟಿ ನೀಡಿದ್ದಾರೆ ಎಂದು ಇರಾನ್‌ನ ನಾಗರಿಕ ವಾಯುಯಾನ ಪ್ರಾಧಿಕಾರದ ಉಪ ಮುಖ್ಯಸ್ಥ ಮುಹಮ್ಮದ್ ಖೊಡಕರಾಮಿ ಹೇಳಿರುವುದಾಗಿ ‘ಇರಾನ್’ ಗುರುವಾರ ವರದಿ ಮಾಡಿದೆ.
ತಮ್ಮ ವಿಮಾನಗಳ ಇರಾನ್ ಹಾರಾಟವನ್ನು ಪುನಾರಂಭಿಸುವ ಇಂಗಿತವನ್ನು ಏರ್ ಫ್ರಾನ್ಸ್ ಮತ್ತು ಡಚ್ ಕಂಪೆನಿ ಕೆಎಲ್‌ಎಂ ಈಗಾಗಲೇ ವ್ಯಕ್ತಪಡಿಸಿವೆ ಎಂದು ಖೊಡಕರಾಮಿ ತಿಳಿಸಿದರು.
ಇರಾನ್‌ನ ಪರಮಾಣು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆ ದೇಶದ ಮೇಲೆ ಹೇರಲಾಗಿದ್ದ ಅಂತಾರಾಷ್ಟ್ರೀಯ ದಿಗ್ಬಂಧನೆಗಳ ಭಾಗವಾಗಿ ಅಂತಾರಾಷ್ಟ್ರೀಯ ವಿಮಾನಯಾನ ಕಂಪೆನಿಗಳು ಇರಾನ್‌ಗೆ ಹಾರುವುದನ್ನು ನಿಲ್ಲಿಸಿದ್ದವು. ಈಗ ಇತ್ತೀಚೆಗೆ ದಿಗ್ಬಂಧನೆಗಳು ತೆರವಾಗಿದ್ದು, ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಪುನಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರಸಕ್ತ, ಇರಾನ್‌ನ ರಾಷ್ಟ್ರೀಯ ವಿಮಾನಯಾನ ಕಂಪೆನಿ ಇರಾನ್ ಏರ್ ಲಂಡನ್‌ಗೆ ವಾರಕ್ಕೆ ಮೂರು ಹಾಗೂ ಪ್ಯಾರಿಸ್ ಮತ್ತು ಆ್ಯಮ್‌ಸ್ಟರ್‌ಡಾಂಗೆ ವಾರಕ್ಕೆ ತಲಾ ಎರಡು ಬಾರಿ ಹಾರಾಟ ನಡೆಸುತ್ತಿದೆ.





