‘ಕಾಲೇಜಿನ ವಿರುದ್ಧ ಮೃತರು ಮಾಡಿರುವ ಆರೋಪಗಳೆಲ್ಲ ಸತ್ಯ’
ಮೂವರು ವಿದ್ಯಾರ್ಥಿನಿಯರ ಆತ್ಮಹತ್ಯೆ
ಚೆನ್ನೈ, ಜ.28: ತಮಿಳುನಾಡಿನ ವಿಲ್ಲುಪುರಂನ ಖಾಸಗಿ ವೈದ್ಯಕೀಯ ಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು, ಆಡಳಿತ ಮಂಡಳಿಯು ದುಬಾರಿ ಶುಲ್ಕ ವಿಧಿಸಿ, ಹಿಂಸೆ ನೀಡುತ್ತಿದೆಯೆಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಮಾಡಿರುವ ಆರೋಪಗಳು ಸತ್ಯವೆಂದು ಗುರುವಾರ ಅಲ್ಲಿನ ವಿದ್ಯಾರ್ಥಿಗಳು ಹೇಳಿದ್ದಾರೆ.
ಎಸ್‌ವಿಎಸ್ ನ್ಯಾಚುರೊಪತಿ ಮತ್ತು ಯೋಗ ಕಾಲೇಜಿನಲ್ಲಿ ಸಾಕಷ್ಟು ವ್ಯವಸ್ಥೆಯಿಲ್ಲ. ತಮ್ಮನ್ನು ತರಗತಿಯೊಳಗೆ ಹಾಗೂ ಹಾಸ್ಟೆಲ್‌ಗಳಲ್ಲಿ ಕ್ಷುದ್ರವಾಗಿ ಬೆದರಿಸಲಾಗುತ್ತಿದೆ. ಅನೇಕರು ಈ ಕಾಲೇಜ್‌ನಿಂದ ಬೇರೆ ಕಾಲೇಜುಗಳಿಗೆ ವರ್ಗಾವಣೆ ಬಯಸುತ್ತಿದ್ದಾರೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಉಪಕುಲಪತಿ ಗುರುವಾರ ವಿದ್ಯಾರ್ಥಿಗಳ ನಿಯೋಗವೊಂದನ್ನು ಭೇಟಿಯಾಗಿ, ವಿಚಾರವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಿ ಚರ್ಚಿಸಲಾಗುವುದು ಹಾಗೂ ವಿದ್ಯಾರ್ಥಿಗಳನ್ನು ಸರಕಾರಿ ಕಾಲೇಜುಗಳಿಗೆ ವರ್ಗಾವಣೆ ಮಾಡಬಹುದೇ ಎಂಬ ಕುರಿತು ನಿರ್ಧಾರವೊಂದನ್ನು ಕೈಗೊಳ್ಳಲಾಗುವುದೆಂಬ ಆಶ್ವಾಸನೆ ನೀಡಿದ್ದಾರೆ. ಕಳೆದ ಶನಿವಾರ, ಟಿ. ಮೋನಿಶಾ, ಇ. ಶರಣ್ಯಾ ಹಾಗೂ ವಿ. ಪ್ರಿಯಾಂಕಾ ಎಂಬ ವಿದ್ಯಾರ್ಥಿನಿಯರು ಕಾಲೇಜಿನ ಸಮೀಪದ ಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಎಸ್‌ವಿಎಸ್ ನ್ಯಾಚುರೊಪತಿ ಮತ್ತು ಯೋಗ ಕಾಲೇಜು ವಿದ್ಯಾರ್ಥಿಗಳಿಂದ ಸಿಕ್ಕಾಪಟ್ಟೆ ಶುಲ್ಕ ವಸೂಲು ಮಾಡುತ್ತಿದೆ. ಅರ್ಹತೆಯಿಂದ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡುವ ಮೂಲಕ ತಾರತಮ್ಯ ಮಾಡುತ್ತಿದೆಯೆಂದು ಅವರು ಆತ್ಮಹತ್ಯಾ ಪತ್ರದಲ್ಲಿ ಆರೋಪಿಸಿದ್ದರು.





