ನಾನು ಪ್ರಧಾನಿ ಹುದ್ದೆ ಬಯಸಿರಲಿಲ್ಲ: ಪ್ರಣವ್ ಮುಖರ್ಜಿ

ಹೊಸದಿಲ್ಲಿ,ಜ.28: ಇಂದಿರಾ ಗಾಂಧಿಯವರ ಹತ್ಯೆಯ ನಂತರ ಮಧ್ಯಾಂತರ ಪ್ರಧಾನಿಯ ಹುದ್ದೆಗೆ ತಾನು ಆಕಾಂಕ್ಷಿಯಾಗಿದ್ದೆ ಎಂಬ ದೀರ್ಘಕಾಲೀನ ಊಹಾಪೋಹಕ್ಕೆ ಅಂತ್ಯ ಹಾಡಲು ಬಯಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಈ ಊಹಾಪೋಹಗಳು ‘‘ಸುಳ್ಳು ಮತ್ತು ದ್ವೇಷಪೂರ್ಣ’’ವಾಗಿವೆ ಎಂದು ಗುರುವಾರ ಇಲ್ಲಿ ಬಣ್ಣಿಸಿದರು.
ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿಯವರು ಬಿಡುಗಡೆಗೊಳಿಸಿದ ತನ್ನ ಆತ್ಮಚರಿತ್ರೆಯ ಎರಡನೆ ಭಾಗ ‘‘ಪ್ರಕ್ಷುಬ್ಧ ವರ್ಷಗಳು:1980-96’’ದಲ್ಲಿ ಪ್ರಣವ್, ನಾನು ಮಧ್ಯಾಂತರ ಪ್ರಧಾನಿಯಾಗಲು ಹಾತೊರೆದಿದ್ದೆ. ಅದಕ್ಕಾಗಿ ನಾನು ಹಕ್ಕು ಮಂಡಿಸಿದ್ದೆ ಎಂಬಂತಹ ಹಲವಾರು ಕಥೆಗಳು ಆಗ ಹರಿದಾಡಿದ್ದವು. ಇವು ರಾಜೀವ್ ಗಾಂಧಿಯವರಲ್ಲಿ ತಪ್ಪು ಅಭಿಪ್ರಾಯಗಳನ್ನು ಮೂಡಿಸಿದ್ದವು. ಈ ಕಥೆಗಳೆಲ್ಲ ಅಪ್ಪಟ ಸುಳ್ಳು ಮತ್ತು ದ್ವೇಷಪೂರ್ಣವಾಗಿದ್ದವು ಎಂದು ಹೇಳಿದ್ದಾರೆ.
‘‘ಸಮಯವು ಬಹಳ ವೇಗವಾಗಿ ಸರಿದು ಹೋಗುತ್ತಿತ್ತು ಮತ್ತು ನಾನು ರಾಜೀವ್ ಜೊತೆ ಮಾತನಾಡಲು ಅತ್ಯಂತ ಕಾತುರನಾಗಿದ್ದೆ. ದಂಪತಿಯ(ರಾಜೀವ್-ಸೋನಿಯಾ) ಬಳಿ ತೆರಳಿದ ನಾನು ನನಗೆ ತುರ್ತಾಗಿ ಮಾತನಾಡಲಿದೆ ಎಂದು ಸೂಚಿಸಲು ರಾಜೀವ್‌ರ ಹೆಗಲನ್ನು ಮೃದುವಾಗಿ ಸ್ಪರ್ಶಿಸಿದ್ದೆ. ಸೋನಿಯಾರ ತೋಳುಗಳಿಂದ ಬಿಡಿಸಿಕೊಂಡ ಅವರು ನನ್ನೊಂದಿಗೆ ಮಾತನಾಡಲು ತಿರುಗಿದ್ದರು. ವಿಷಯವು ತುಂಬ ತುರ್ತಿನದು ಮತ್ತು ರಹಸ್ಯದ್ದು ಅಲ್ಲವಾಗಿದ್ದರೆ ನಾನು ತನಗೆ ತೊಂದರೆ ನೀಡುತ್ತಿರಲಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡ ರಾಜೀವ್ ನನ್ನನ್ನು ಬಾತ್‌ರೂಮಿಗೆ ಕರೆದೊಯ್ದಿದ್ದರು. ಕೋಣೆಯನ್ನು ಪ್ರವೇಶಿಸಬಹುದಾದ ಯಾರಾದರೂ ನಾವು ಮಾತನಾಡುವುದನ್ನು ಗಮನಿಸದಿರಲಿ ಎನ್ನುವುದು ಅವರ ಉದ್ದೇಶವಾಗಿತ್ತು’’ ಎಂದು ಪ್ರಣವ್ ತನ್ನ ನೆನಪನ್ನು ಕೆದಕಿದ್ದಾರೆ.
‘‘ನಾವಿಬ್ಬರೂ ಆಗಿನ ರಾಜಕೀಯ ಪರಿಸ್ಥಿತಿಯ ಕುರಿತು ಮತ್ತು ರಾಜೀವ್‌ರನ್ನು ಪ್ರಧಾನಿಯಾಗಿ ನೇಮಿಸುವ ಬಗ್ಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳ ಕುರಿತು ಚರ್ಚಿಸಿದ್ದೆವು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ ಬಳಿಕ ನಾನು ಬಾತ್‌ರೂಮಿನಿಂದ ಹೊರಗೆ ಬಂದು ಪ್ರತಿಯೊಬ್ಬರಿಗೂ ಆ ನಿರ್ಧಾರವನ್ನು ತಿಳಿಸಿದ್ದೆ ’’ಎಂದು ಅವರು ಹೇಳಿದ್ದಾರೆ.
ತನ್ನನ್ನು ರಾಜೀವ್ ಸಂಪುಟದಿಂದ ಏಕೆ ಕೈ ಬಿಡಲಾಗಿತ್ತು ಮತ್ತು ಪಕ್ಷದಿಂದ ಏಕೆ ಉಚ್ಚಾಟಿಸಲಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಣವ್, ‘‘ಅವರು(ರಾಜೀವ್) ತಪ್ಪುಗಳನ್ನು ಮಾಡಿದ್ದರು ಮತ್ತು ನಾನೂ ತಪ್ಪುಗಳನ್ನು ಮಾಡಿದ್ದೆ ಎಂದಷ್ಟೇ ನಾನು ಹೇಳಬಲ್ಲೆ. ಅವರು ಇತರರ ಪ್ರಭಾವಕ್ಕೊಳಗಾಗಿದ್ದರು ಮತ್ತು ನನ್ನ ವಿರುದ್ಧ ಅವರ ಚಾಡಿಮಾತುಗಳಿಗೆ ಕಿವಿ ನೀಡಿದ್ದರು. ನಾನು ನನ್ನ ಹತಾಶೆ ನನ್ನ ಸಹನೆಯ ಮೇಲೆ ಸವಾರಿ ಮಾಡಲು ಅವಕಾಶ ನೀಡಿದ್ದೆ’’ ಎಂದಿದ್ದಾರೆ.





