ರಾಜ್ಯಪಾಲರ ಶಿಫಾರಸಿಗೆ ಗೋಹತ್ಯೆ-ಭೀತಿವಾದ ಕಾರಣ!
ಅರುಣಾಚಲದಲ್ಲಿ ರಾಷ್ಟ್ರಪತಿ ಆಡಳಿತ ಹೊಸದಿಲ್ಲಿ, ಜ.28: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಶಿಫಾರಸು ಮಾಡಲು ಗೋಹತ್ಯೆ ಮತ್ತು ಭೀತಿವಾದವನ್ನು ಕಾರಣಗಳನ್ನಾಗಿ ರಾಜ್ಯಪಾಲ ಜ್ಯೋತಿಪ್ರಸಾದ್ ರಾಜಖೋವಾ ಅವರು ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಸಲ್ಲಿಸಿರುವ ಅರ್ಜಿಗೆ ಎರಡು ದಿನಗಳಲ್ಲಿ ಉತ್ತರಿಸುವಂತೆ ಬುಧವಾರ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಸರ್ವೋಚ್ಚ ನ್ಯಾಯಾಲಯವು, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿ ಕೇಂದ್ರಕ್ಕೆ ಸಲ್ಲಿಸಿದ್ದ ವರದಿಗಳನ್ನು ತನಗೊಪ್ಪಿಸುವಂತೆ ರಾಜಖೋವಾರನ್ನು ಆದೇಶಿಸಿತ್ತು.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಸೂಚನೆಯಂತೆ ರಾಜಖೋವಾ ಅವರು ಅರುಣಾಚಲ ಪ್ರದೇಶದಲ್ಲಿನ ತನ್ನ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅರುಣಾಚಲ ಪ್ರದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯನ್ನು ಬಿಜೆಪಿ ಸರಕಾರವು ತುರ್ತು ಸ್ಥಿತಿ ಸದೃಶ ಪರಿಸ್ಥಿತಿಗೆ ಹೋಲಿಸಿದೆ.
ಕೇಂದ್ರ ಸಂಪುಟದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ರಾಜ್ಯದಲ್ಲಿ ಕೇಂದ್ರಾಡಳಿತದ ಆದೇಶಕ್ಕೆ ಮಂಗಳವಾರ ಸಹಿ ಹಾಕಿದ್ದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಪ್ರತಿಪಾದಿಸಿರುವ ತನ್ನ ವರದಿಯಲ್ಲಿ ರಾಜಖೋವಾ ಅವರು, ರಾಜಭವನದ ಹೊರಗಡೆ ದನವೊಂದನ್ನು ಹತ್ಯೆ ಮಾಡುತ್ತಿರುವ ಛಾಯಾಚಿತ್ರವನ್ನು ಲಗತ್ತಿಸಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ರಾಜಖೋವಾರ ಆದೇಶದಂತೆ ವಿಧಾನ ಸಭಾ ಅಧಿವೇಶನದ ಹಿಂದೂಡಿಕೆಯನ್ನು ಮತ್ತು ಮುಖ್ಯಮಂತ್ರಿ ನಬಮ್ ಟುಕಿ(ಈಗ ಮಾಜಿ) ಅವರ ಪದಚ್ಯುತಿಯನ್ನು ಉಚ್ಚ ನ್ಯಾಯಾಲಯವು ರದ್ದುಗೊಳಿಸಿದ ಬಳಿಕ ಹಲವಾರು ಕಾಂಗ್ರೆಸ್ ಶಾಸಕರು ರಾಜ ಭವನದ ಹೊರಗಡೆ ದನವೊಂದನ್ನು ಬಲಿ ನೀಡಿದ್ದರು ಎಂದು ದೈನಿಕವು ವರದಿ ಮಾಡಿದೆ.
ಟುಕಿ ಅವರು ನಿಷೇಧಿತ ಭಯೋತ್ಪಾದಕ ಸಂಘಟನೆ ಎನ್‌ಎಸ್‌ಸಿಎನ್-ಕೆ ಜೊತೆ ಒಡನಾಟ ಹೊಂದಿದ್ದಾರೆ ಎಂದೂ ರಾಜಖೋವಾ ತನ್ನ ನಾಲ್ಕು ಪುಟಗಳ ವರದಿಯಲ್ಲಿ ಆರೋಪಿಸಿದ್ದಾರೆ.
ಸರಕಾರಿ ಅಧಿಕಾರಿಗಳೇ ಹೆಚ್ಚಿರುವ, ನಿಷಿಗಳ ಸರ್ವೋಚ್ಚ ಕೋಮು ಸಂಘಟನೆ ನಿಷಿ ಇಲೈಟ್ ಸೊಸೈಟಿಗೆ ಪ್ರಚೋದನೆ ಮತ್ತು ಹಣಕಾಸು ನೆರವು ನೀಡುವ ಮೂಲಕ ಟುಕಿ ಸರಕಾರಿ ಅಧಿಕಾರಿಗಳಿಂದ ಅಶಿಸ್ತು,ಅರಾಜಕತೆ ಮತ್ತು ರಾಜಕೀಯವನ್ನು ಪ್ರೋತ್ಸಾಹಿಸುತ್ತಿದ್ದರು ಎಂದೂ ರಾಜಖೋವಾ ಆರೋಪಿಸಿದ್ದಾರೆನ್ನಲಾಗಿದೆ. ನಿಷಿ ಅರುಣಾಚಲ ಪ್ರದೇಶದ ಪ್ರಮುಖ ಬುಡಕಟ್ಟು ಜನಾಂಗವಾಗಿದೆ. ‘‘ಅರುಣಾಚಲ ಪ್ರದೇಶದಲ್ಲಿ ಸಂವಿಧಾನದ ವೈಫಲ್ಯ’’ ಶೀರ್ಷಿಕೆಯ ಈ ವರದಿಯು ರಾಜಖೋವಾ ಅವರು 2015, ಸೆಪ್ಟಂಬರ್‌ನಿಂದ ಕೇಂದ್ರಕ್ಕೆ ರವಾನಿಸಿರುವ 15 ವರದಿಗಳಲ್ಲೊಂದಾಗಿದೆ. ವಸ್ತುಶಃ ಕಳೆದ ಹಲವಾರು ತಿಂಗಳುಗಳಿಂದಲೂ ರಾಜ್ಯದಲ್ಲಿ ಅಲ್ಪಸಂಖ್ಯಾತ ಸರಕಾರವು ಆಡಳಿತ ನಡೆಸುತ್ತಿದೆ ಎಂದು ವರದಿಯು ಹೇಳಿದೆ.
ರಾಜ್ಯದಲ್ಲಿ ದಿನಗಳೆದಂತೆ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಹದಗೆಡುತ್ತಲೇ ಇದೆ. ಡಿ.15,16 ಮತ್ತು 17 ಈ ಮೂರು ದಿನಗಳಲ್ಲಂತೂ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು ಮತ್ತು ಸರಕಾರವಿದೆ ಎನ್ನುವುದಕ್ಕೆ ಯಾವುದೇ ಕುರುಹುಗಳಿರಲಿಲ್ಲ. ತನ್ನನ್ನು ನಿಂದಿಸಲಾಗಿತ್ತು ಮತ್ತು ತನಗೆ ಬೆದರಿಕೆಯೊಡ್ಡಲಾಗಿತ್ತು. ತನ್ನ ಮೇಲೆ ದೈಹಿಕ ಹಲ್ಲೆಗೂ ಪ್ರಯತ್ನ ನಡೆದಿತ್ತು ಮತ್ತು ತನ್ನನ್ನು ದಿಗ್ಬಂಧನಕ್ಕೊಳಪಡಿಸಲು ಸಚಿವರು ಪ್ರಯತ್ನಿಸಿದ್ದರು. ಅದೃಷ್ಟವಶಾತ್ ತನ್ನ ಜಾಗೃತ ಸಿಬ್ಬಂದಿ ತನ್ನನ್ನು ರಕ್ಷಿಸಿದ್ದರು ಎಂದೂ ರಾಜಖೋವಾ ವರದಿಯಲ್ಲಿ ತಿಳಿಸಿದ್ದಾರೆ.







