ಉಡುಪಿ: ಫೆ.3-6ರವರೆಗೆ ಹಸ್ತಪ್ರತಿ ತರಬೇತಿ ಶಿಬಿರ
ಉಡುಪಿ, ಜ.28: ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಫೆ.3ರಿಂದ 6ರವರೆಗೆ ಉಡುಪಿಯಲ್ಲಿ ‘ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ’ವನ್ನು ಎಂಜಿಎಂ ಕಾಲೇಜಿನಲ್ಲಿ ಹಮ್ಮಿಕೊಂಡಿದೆ.
ಫೆ.3ರಂದು ನಡೆಯುವ ಸಮಾರಂಭದಲ್ಲಿ ಹಿರಿಯ ವಿದ್ವಾಂಸರಾದ ಡಾ. ಕೆಳದಿ ಗುಂಡಾಜೋಯಿಸರು ಶಿಬಿರವನ್ನು ಉದ್ಘಾಟಿಸುವರು. ಹಂಪಿ ಕನ್ನಡ ವಿವಿಯ ಕುಲಪತಿಗಳಾದ ಡಾ.ಮಲ್ಲಿಕಾ ಎಸ್. ಘಂಟಿ ಅಧ್ಯಕ್ಷತೆ ವಹಿಸುವರು. ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಫ್.ಟಿ.ಹಳ್ಳಿಕೇರಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಹೆರಂಜೆ ಕೃಷ್ಣಭಟ್ ಉಪಸ್ಥಿತರಿರುವರು. ಶಿಬಿರದ ನಿರ್ದೇಶಕರಾಗಿ ಪ್ರಾಧ್ಯಾಪಕ ಡಾ.ಎಸ್.ಎಸ್. ಅಂಗಡಿ ಕಾರ್ಯನಿರ್ವಹಿಸುವರು. ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಭಾಗವಹಿಸುವರು. ನಾಲ್ಕು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಹಸ್ತಪ್ರತಿಗಳ ಅರ್ಥ, ಸ್ವರೂಪ, ಓದುವ ರೀತಿ, ಕ್ಷೇತ್ರ ಕಾರ್ಯ, ಸಂರಕ್ಷಿಸುವ ವಿಧಾನ ಮುಂತಾದ ವಿಷಯಗಳ ಕುರಿತು ತಾತ್ವಿಕ ಮತ್ತು ಪ್ರಾಯೋಗಿಕವಾಗಿ ತಿಳಿಸಲಾಗುವುದು.
ಫೆ.6ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣುಭಟ್ಟ ಅವರು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ಮನೋವೈದ್ಯ ಡಾ.ವಿರೂಪಾಕ್ಷಿ ದೇವರಮನೆ ಭಾಗವಹಿ ಸುವರು. ಕನ್ನಡ ವಿವಿಯ ಕುಲಸಚಿವ ಡಾ. ಡಿ. ಪಾಂಡುರಂಗಬಾಬು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.





