ಬೇಡಿಕೆ ಈಡೇರಿಕೆಗೆ ಅಧಿಕಾರಿ, ಜನಪ್ರತಿನಿಧಿಗಳಿಂದ ಭರವಸೆ: ಒಂಟಿ ಧರಣಿ ಅಂತ್ಯ
ಬಂಟ್ವಾಳ, ಜ. 28: ಬಿ.ಸಿ.ರೋಡ್ ನಗರವನ್ನು ಪುರಸಭಾಡಳಿತ ಸಮಗ್ರ ಅಭಿವೃದ್ಧಿಗೊಳಿಸಬೇಕು. ಪುರಸಭಾಡಳಿತವನ್ನು ಜನಸ್ನೇಹಿಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ನ್ಯಾಯಪರ ಸಮಿತಿಯ ಸದಸ್ಯ, ಹೋರಾಟಗಾರ ಪ್ರಭಾಕರ ದೈವಗುಡ್ಡೆ ಆರಂಭಿಸಿದ್ದ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಕೈ ಬಿಟ್ಟಿದ್ದಾರೆ. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಬುಡಾ ಅಧ್ಯಕ್ಷ ಪಿಯೂಸ್ ರೊಡ್ರಿಗಸ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸಾಮಾಜಿಕ ನ್ಯಾಯಪರ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ, ಮುಖ್ಯಾಧಿಕಾರಿ ಸುಧಾಕರ್, ಪ್ರಭಾಕರ ದೈವಗುಡ್ಡೆರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಬುಧವಾರದಿಂದ ಆರಂಭಗೊಳಿಸಿದ್ದ ಸತ್ಯಾಗ್ರಹವನ್ನು ಅವರು ಕೈ ಬಿಟ್ಟರು. ಮುಂದಿನ ಹದಿನೈದು ದಿನದ ಒಳಗಾಗಿ ಅಧಿಕಾರಿಗಳು ನೀಡಿದ ಭರವಸೆಯನ್ನು ಈಡೇರಿಸದೆ ಇದ್ದಲ್ಲಿ ಮತ್ತೆ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಕೆರೆ ಅಭಿವೃದ್ಧಿ ಶುಲ್ಕವನ್ನು ವಿನಾಯಿತಿಗೊಳಿಸಲು ಸಲ್ಲಿಸಲಾದ ಮನವಿಯನ್ನು ಪರಿಶೀಲಿಸಿ, ಸಚಿವರ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪುರಸಭಾ ವ್ಯಾಪ್ತಿಯ ಕೆರೆಗಳ ಮಾಹಿತಿಗಳನ್ನು ತಹಶೀಲ್ದಾರರಲ್ಲಿ ಕೇಳಲಾಗಿದೆ. ಅವುಗಳ ಪುನಶ್ಚೇತನಕ್ಕೆ ತಕ್ಷಣ ಕ್ರಮ ಜರಗಿಸಲಾಗುವುದು ಎಂದು ಬುಡಾ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ಈ ಸಂದರ್ಭದಲ್ಲಿ ಪ್ರಭಾಕರರಿಗೆ ಮನವರಿಕೆ ಮಾಡಿದರು.
ಪುರಸಭೆಗೆ ಸಾರ್ವಜನಿಕರು ಸಲ್ಲಿಸುವ ಮನವಿ, ದೂರು, ಅರ್ಜಿಗಳನ್ನು ಅಧಿಕಾರಿಗಳು ಸಕಾಲಿಕವಾಗಿ ಇತ್ಯ ರ್ಥ ಮಾಡಬೇಕು. ಕಚೇರಿಯ ಕೆಲ ವೊಂದು ಸಿಬ್ಬಂದಿ ವಿನಾ ಕಾರಣ ಸಾರ್ವಜನಿಕರನ್ನು ಅಲೆದಾಡಿಸುವುದು ನಿಲ್ಲಿಸಬೇಕು. ಪುರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ೆಲ ವೊಂದು ನಿಯಮಾವಳಿಗಳನ್ನು ಸಡಿಲುಗೊಳಿಸಬೇಕು ಎಂದು ಒತ್ತಾಯಿಸಿ ಪ್ರಭಾಕರ ದೈವಗುಡ್ಡೆ, ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಬೇಡಿಕೆಗೆ ಪೂರಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಗುರುವಾರವೂ ಧರಣಿ ಮುಂದುವರಿಸಲಾಗಿತ್ತು.





