ಅಂತಾರಾಷ್ಟ್ರೀಯ ಸಿನಿಮೋತ್ಸವ; ಚಲನಚಿತ್ರ ರಂಗದಲ್ಲಿ ಸರಕಾರದ ಹಸ್ತಕ್ಷೇಪ ಬೇಡ: ಜಯಾ ಬಚ್ಚನ್

ಬೆಂಗಳೂರು, ಜ.28: ಸರಕಾರಗಳು ಚಲನಚಿತ್ರ ರಂಗದ ಬೆಳವಣಿಗೆಗೆ ಪೂರಕವಾದ ಬೆಂಬಲ, ಪ್ರೋತ್ಸಾಹ ನೀಡಬೇಕೆ ಹೊರತು ಹಸ್ತಕ್ಷೇಪ ಮಾಡಬಾರದು ಎಂದು ರಾಜ್ಯಸಭಾ ಸದಸ್ಯೆ ಹಾಗೂ ಹಿರಿಯ ಕಲಾವಿದೆ ಜಯಾ ಬಚ್ಚನ್ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದ ಎದುರು ರಾಜ್ಯ ಸರಕಾರದ ವಾರ್ತಾ ಇಲಾಖೆ, ಚಲನಚಿತ್ರ ಅಕಾಡಮಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಎಂಟನೆ ಬೆಂಗಳೂರು ಅಂತಾರಾಷ್ಟ್ರೀಯ ಸಿನೆಮೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಲನಚಿತ್ರ ರಂಗದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಸೃಜನಶೀಲತೆ ನಾಶವಾಗುತ್ತದೆ. ಒಮ್ಮೆ ಸೃಜನಶೀಲತೆ ಕಳೆದು ಹೋದರೆ ಸದಭಿರುಚಿ ಹಾಗೂ ಗುಣಮಟ್ಟದ ಚಲನಚಿತ್ರಗಳ ನಿರ್ಮಾಣ ಹೇಗೆ ಸಾಧ್ಯ. ಕಲಾವಿದರ ಕಲ್ಪನೆ, ಚಿಂತನೆಗೆ ಮುಕ್ತ ಅವಕಾಶ ವಿಲ್ಲದಿದ್ದರೆ, ಚಲನಚಿತ್ರ ರಂಗದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಯುಂಟು ಮಾಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಚಲನಚಿತ್ರರಂಗದ ಬೆಳವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹ. ಮೈಸೂರಿನಲ್ಲಿ ಚಲನಚಿತ್ರ ನಗರಿ ನಿರ್ಮಾಣಕ್ಕೆ 100 ಎಕರೆ ಭೂಮಿ ನೀಡಿರುವುದು ಉತ್ತಮ ನಿರ್ಧಾರ. ಕನ್ನಡ ಚಲನಚಿತ್ರ ರಂಗವು ಜಾಗತಿಕ ಮಟ್ಟದಲ್ಲಿ ತನ್ನ ಛಾಪು ಮೂಡಿಸಲಿ ಎಂದು ಜಯಾ ಬಚ್ಚನ್ ಹಾರೈಸಿದರು. ಕಹಿ ನೆನಪು ಮಾಸಲಿ: ನಮ್ಮ ಕುಟುಂಬ ಬೆಂಗಳೂರಿಗೆ ಭೇಟಿ ನೀಡಿದಾಗ ಏನಾದರೂ ಅಹಿತಕರ ಅನುಭವಗಳು ಆಗುತ್ತವೆ. ಅದು ಚಲನಚಿತ್ರದ ಚಿತ್ರೀಕರಣ (ಕೂಲಿ ಸಿನೆಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಅಮಿತಾಭ್ ಬಚ್ಚನ್ ಗಂಭೀರವಾಗಿ ಗಾಯಗೊಂಡಿದ್ದು)ವಾಗಿರಲಿ ಅಥವಾ ವಿಶ್ವ ಸುಂದರಿ ಸ್ಪರ್ಧೆ(ಈ ಸ್ಪರ್ಧೆಯಿಂದಾಗಿ ಅಮಿತಾಭ್ ಬಚ್ಚನ್ ಸಾಲದ ಸುಳಿಗೆ ಸಿಲುಕಿದರು)ಯಾಗಿರಲಿ. ಭವಿಷ್ಯದಲ್ಲಿ ಇಂತಹ ಕಹಿ ನೆನಪುಗಳು ಮರುಕಳಿಸದಿರಲಿ ಎಂಬುದು ನನ್ನ ಹಾರೈಕೆ ಎಂದು ಅವರು ಹೇಳಿದರು.
ಬೆಂಗಳೂರು ನಗರ ಉತ್ತಮ ವಾತಾವರಣ ವನ್ನು ಹೊಂದಿದ್ದು, ಇಲ್ಲಿ ಮತ್ತೆ ತಮ್ಮ ಚಲನಚಿತ್ರಗಳ ಚಿತ್ರೀಕರಣವನ್ನು ನಡೆಸುವಂತೆ ನನ್ನ ಪತಿ(ಅಮಿತಾಭ್ ಬಚ್ಚನ್)ಗೂ ಹೇಳುತ್ತೇನೆ ಎಂದು ಜಯಾ ಬಚ್ಚನ್ ತಿಳಿಸಿದರು.
ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಚಲನಚಿತ್ರ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ, ಚಲನಚಿತ್ರೋತ್ಸವಗಳು ಹೊಸಬರಿಗೆ ಸಿನೆಮಾಗಳ ಬಗ್ಗೆ ಅಧ್ಯಯನ, ಸಂಶೋಧನೆ, ಕಲಿಕೆಗೆ ವೇದಿಕೆಯನ್ನು ಕಲ್ಪಿಸುತ್ತದೆ. ಇಂತಹ ಸಿನೆಮಾ ಉತ್ಸವಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ಪರಸ್ಪರ ವಿಚಾರ ವಿನಿಮಯಗಳಿಗೆ ಅವಕಾಶ ಸಿಗುತ್ತದೆ ಎಂದರು.
ಸ್ಪರ್ಧೆಯ ಮೂಲಕ ಅಸ್ತಿತ್ವ ಉಳಿಸಿಕೊಂಡಿ ದ್ದೇವೆ: ಸಂಜಯ್ ಲೀಲಾ ಬನ್ಸಾಲಿ ತಮ್ಮ ಸಿನಿಮಾದ ಒಂದು ಸೆಟ್‌ಗೆ ಖರ್ಚು ಮಾಡುವ ಮೊತ್ತದಲ್ಲಿ ನಾವು ಮೂರು ಚಲನಚಿತ್ರಗಳನ್ನು ನಿರ್ಮಿಸಿ, ಸಮಾಜಕ್ಕೆ ತಲುಪುತ್ತಿದ್ದೇವೆ ಎಂದು ರಾಜ್ಯ ಕಲಾವಿದರ ಸಂಘದ ಅಧ್ಯಕ್ಷ ಹಾಗೂ ಸಚಿವ ಡಾ.ಅಂಬರೀಶ್ ತಿಳಿಸಿದರು.
ನಗರದ ಹೃದಯ ಭಾಗದಲ್ಲಿ ಎಂ.ಜಿ.ರಸ್ತೆ ಯಲ್ಲಿರುವ ಚಲನಚಿತ್ರ ಮಂದಿರಗಳಲ್ಲಿ ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಅವರ ಚಿತ್ರದ ಪೋಸ್ಟರ್ ನೋಡಲು ಸಾಧ್ಯವಿಲ್ಲ. ಕೆ.ಜಿ.ರಸ್ತೆಯಲ್ಲಿನ ಗೀತಾ ಥಿಯೇಟರ್-ತಮಿಳು, ಹಿಮಾಲಯ-ಲೈಂಗಿಕ ಚಿತ್ರಗಳು, ಮೂವಿ ಲ್ಯಾಂಡ್-ತೆಲುಗು, ಅಲಂಕಾರ್ ಹಾಗೂ ಕಲ್ಪನಾ ಥಿಯೇಟರ್‌ಗಳಲ್ಲಿ ಹಿಂದಿ ಚಿತ್ರಗಳು ಆವರಿಸಿ ಕೊಂಡಿರುತ್ತವೆ. ಆದರೂ, ಲಭ್ಯವಿರುವ ಸೀಮಿತ ಅವಕಾಶದಲ್ಲೇ ಸ್ಪರ್ಧೆಯ ಮೂಲಕ ಕನ್ನಡ ಚಲನಚಿತ್ರರಂಗ ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಲನಚಿತ್ರೋತ್ಸವ ನಿರ್ದೇಶನಾಲಯ: ರಾಜ್ಯ ಚಲನಚಿತ್ರ ಅಕಾಡಮಿ ಅಧೀನದಲ್ಲಿ ಚಲನಚಿತ್ರೋತ್ಸವ ನಿರ್ದೇಶನಾಲಯವನ್ನು ಮುಂದಿನ ಬಜೆಟ್‌ನಲ್ಲಿ ಘೋಷಿಸುವಂತೆ ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಜ್ಯ ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್. ವಿ. ರಾಜೇಂದ್ರಸಿಂಗ್‌ಬಾಬು ಮನವಿ ಮಾಡಿದರು.
ಕೈಗಾರಿಕೆ, ಪ್ರವಾಸೋದ್ಯಮದ ಮಾದರಿಯಲ್ಲಿ ಚಲನಚಿತ್ರಕ್ಕೂ ಪ್ರತ್ಯೇಕ ನೀತಿಯನ್ನು ಸಿದ್ಧಪಡಿ ಸಲು ಮುಖ್ಯಮಂತ್ರಿ ನೇಮಕ ಮಾಡಿರುವ 10-12 ಸದಸ್ಯರ ಸಮಿತಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಆದಷ್ಟು ಶೀಘ್ರದಲ್ಲೇ ನೀತಿಯ ಕರಡು ಪ್ರತಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ಹಾಲಿವುಡ್ ಚಲನಚಿತ್ರ ನಿರ್ಮಾಪಕ ಡಾ.ಅಶೋಕ್ ಅಮೃತರಾಜ್, ಸಚಿವರಾದ ಆರ್.ರೋಷನ್‌ಬೇಗ್, ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ತೆಲುಗು ನಟ ವೆಂಕಟೇಶ್, ಡಾ.ಶಿವರಾಜ್‌ಕುಮಾರ್, ಉತ್ಸವದ ಕಲಾತ್ಮಕ ನಿರ್ದೇಶಕಿ ಡಾ.ಜಯಮಾಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೌ್ರರ್ಯ-ಅಶಿ್ಲೀಲತೆಗೆ ಕಡಿವಾಣ ಹಾಕಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಜಗತ್ತಿನಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಚಲನಚಿತ್ರಗಳಲ್ಲಿ ಸಮಾಜದ ಹಿತದೃಷ್ಟಿಯಿಂದ ಕ್ರೌರ್ಯ ಹಾಗೂ ಅಶ್ಲೀಲತೆಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ರಾಷ್ಟ್ರೀಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ವರದಿಯನ್ನು ಅವಲೋಕಿಸಿದಾಗ ಚಲನಚಿತ್ರ ಗಳಲ್ಲಿ ಪ್ರದರ್ಶಿಸುವ ಕ್ರೌರ್ಯ, ಅಶ್ಲೀಲತೆ ಯಿಂದ ಪ್ರಚೋದನೆಗೆ ಒಳಗಾಗಿ ಅನೇಕ ಯುವಕರು ಅವುಗಳನ್ನು ಅನುಕರಣೆ ಮಾಡುವ ಮೂಲಕ ಸಮಾಜಘಾತುಕರಾಗುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ತಂತ್ರಜ್ಞಾನ ಬೆಳೆಯದೆ, ಚಲನಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುವವರ ಕೊರತೆ ಇದ್ದ ಸಂದರ್ಭದಲ್ಲಿ ಯೂ ಅತ್ಯುತ್ತಮವಾದ ಚಲನಚಿತ್ರ ಗಳು ಸಿದ್ಧವಾಗಿವೆ. ಇಂದಿಗೂ ಸಿನಿಪ್ರಿಯರು ಅಂತಹ ಚಿತ್ರಗಳು ಹಾಗೂ ಕಲಾವಿದರನ್ನು ಮರೆತಿಲ್ಲ. ಪ್ರತಿಯೊಂದು ಸಿನೆಮಾ ಸಾಮಾಜಿಕ ಕಳಕಳಿಯನ್ನು ಹೊಂದಿರುತ್ತಿತ್ತು. ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುತ್ತಿತ್ತು ಎಂದು ನೆನಪು ಮಾಡಿಕೊಂಡರು.
ಕನ್ನಡ ಚಲನಚಿತ್ರಗಳು ಗುಣಮಟ್ಟದಲ್ಲಿ ಕಡಿಮೆಯಿಲ್ಲ. ಕನ್ನಡ ಚಲನಚಿತ್ರಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಹೊರ ರಾಜ್ಯ, ದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ. ಇಂತಹ ಉತ್ಸವಗಳು ನಡೆದ ಚಲನಚಿತ್ರ ರಂಗದ ಬೆಳವಣಿಗೆಗೆ ಪೂರಕವಾಗಿರಲಿ. ರಾಜ್ಯ ಸರಕಾರವು ಕನ್ನಡ ಚಲನಚಿತ್ರ ರಂಗದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಬೆಂಬಲ, ಪ್ರೋತ್ಸಾಹವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಕನ್ನಡ ಚಲನಚಿತ್ರಗಳಿಗೆ ಶೇ.100ರಷ್ಟು ತೆರಿಗೆ ವಿನಾಯಿತಿ, ವಾರ್ಷಿಕ 100 ಚಿತ್ರಗಳಿಗೆ 10 ಲಕ್ಷ ರೂ.ಸಹಾಯ ಧನ, ಮಕ್ಕಳ ಚಲನಚಿತ್ರಗಳಿಗೆ 25 ಲಕ್ಷ ರೂ.ಸಹಾಯಧನ ನೀಡುತ್ತಿದ್ದೇವೆ. ಕನ್ನಡ ಚಲನಚಿತ್ರಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗೆಲ್ಲುವಂತಾಗಬೇಕು ಎಂದು ಮುಖ್ಯಮಂತ್ರಿ ಹಾರೈಸಿದರು.







