ಅರಣ್ಯವಾಸಿಯ ನೋವಿಗೆ ಜಿಲ್ಲಾಡಳಿತ ಸ್ಪಂದನೆ

ನೂಜಾಲ ಚಂದ್ರಶೇಖರರಿಗೆ ಅಕ್ರಮ ಸಕ್ರಮದಡಿ ಒಂದು ಎಕರೆ ಭೂಮಿಯ ಭರವಸೆ
ಅನ್ಯಾಯದ ಬಗ್ಗೆ ಮೇಲ್ಮನವಿಗೆ ಕಾನೂನು ನೆರವು
ಮಂಗಳೂರು, ಜ.28: ಸುಳ್ಯದ ನೆಲ್ಲೂರು ಕೆಮ್ರಾಜೆ-ಉಬರಡ್ಕ ಸಹಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನಿಂದ ಪಡೆದ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ತನ್ನ ಭೂಮಿಯನ್ನು ಕಳೆದುಕೊಂಡು ಪ್ರಸ್ತುತ ಕಾಡು ಬದಿಯಲ್ಲಿ ಕಾರಿನಲ್ಲಿ ವಾಸವಾಗಿರುವ ನೂಜಾಲ ಚಂದ್ರಶೇಖರರಿಗೆ ನೆರವು ನೀಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಸ್ಪಂದಿಸಿದೆ. ಚಂದ್ರಶೇಖರರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಇಂದು ಮಂಗಳೂರಿಗೆ ಕರೆಸಿಕೊಂಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಎಸ್ಪಿ ಡಾ. ಶರಣಪ್ಪ ಎಸ್.ಡಿ. ಉಪಸ್ಥಿತಿಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಚರ್ಚಿಸಿದರು. ಚಂದ್ರಶೇಖರ್ ಬ್ಯಾಂಕ್‌ನಿಂದ ಪಡೆದ ಸಾಲ, ಹರಾಜು ಪ್ರಕ್ರಿಯೆ, ಅವರು ಕಾಡಿನಲ್ಲಿ ಒಂಟಿಯಾಗಿ ವಾಸಿಸಲು ಕಾರಣವಾದ ಪರಿಸ್ಥಿತಿಯನ್ನು ಅವಲೋಕಿಸಿದ ಜಿಲ್ಲಾಧಿಕಾರಿ, ಚಂದ್ರಶೇಖರ್‌ರಿಗೆ ಅಕ್ರಮ ಸಕ್ರಮದಡಿ ಅವರು ವಾಸಿಸುತ್ತಿರುವ ಸ್ಥಳದಲ್ಲಿ ಒಂದು ಎಕರೆ ಜಮೀನನ್ನು ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು. ಸಹಕಾರಿ ಸಂಘದಿಂದ ಪಡೆದ ಸಾಲದ ಹಿನ್ನೆಲೆಯಲ್ಲಿ ತನ್ನ ಭೂಮಿ ಹರಾಜುಗೊಂಡು ಮಾರಾಟವಾಗಿ ಅನ್ಯಾಯವಾಗಿದೆ ಎಂಬ ಚಂದ್ರಶೇಖರ್‌ರ ದೂರಿನ ಬಗ್ಗೆ ಹೈಕೋರ್ಟ್‌ನಲ್ಲಿ ಸರಕಾರಿ ವಕೀಲರ ಮೂಲಕ ಉಚಿತವಾಗಿ ಕಾನೂನು ನೆರವಿನ ಭರವಸೆಯನ್ನೂ ಜಿಲ್ಲಾಧಿಕಾರಿ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಖ್ಯಾತ ಮಾನಸಿಕ ತಜ್ಞ ಡಾ.ರವೀಶ್ ತುಂಗಾ, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಡಾ.ಹಿಲ್ಡಾ ರಾಯಪ್ಪನ್, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಹಾಗೂ ಇತರ ಹಲವರ ಸಮ್ಮುಖದಲ್ಲಿ ಸುಮಾರು ಅರ್ಧ ತಾಸಿಗೂ ಅಧಿಕ ಸಮಯ ಚಂದ್ರಶೇಖರರ ಮಾನಸಿಕ ಸ್ಥಿರತೆಯ ಕುರಿತು ಪರಿಶೀಲನೆ ನಡೆಸಲಾಯಿತು. ಅವರ ದೈಹಿಕ ಪರಿಶೀಲನೆಯ ಅಗತ್ಯವಿರುವ ಬಗ್ಗೆ ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ವೆನ್ಲಾಕ್‌ನಲ್ಲಿ ಚಿಕಿತ್ಸೆಗೆ ಮುಂದಾಗುವಂತೆ ಅವರ ಮನವೊಲಿಕೆ ಮಾಡಲಾಯಿತು. ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದ ನೂಜಾಲ ಚಂದ್ರಶೇಖರ 1999ರಲ್ಲಿ ಸುಳ್ಯದ ನೆಲ್ಲೂರು ಕೆಮ್ರಾಜೆ-ಉಬರಡ್ಕ ಸಹಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನಿಂದ ಕೃಷಿ ಸಾಲ ಪಡೆದಿದ್ದರು. ಸಾಲ ತೀರಿಸದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ಚಂದ್ರಶೇಖರ ಅವರ ಪಾಲಿಗೆ ಕುಟುಂಬದಿಂದ ದೊರಕಿದ್ದ 2 ಎಕರೆ 29 ಸೆಂಟ್ಸ್ ಭೂಮಿಯನ್ನು ಸಹಕಾರಿ ಬ್ಯಾಂಕ್ 2002ರ ಅಕ್ಟೋಬರ್ 21ರಂದು ಹರಾಜು ಹಾಕಿತ್ತು. ಬಳಿಕ 2003ರ ಜೂನ್ 21ರಂದು ಪೊಲೀಸರ ಸಹಕಾರದೊಂದಿಗೆ ಚಂದ್ರಶೇಖರರನ್ನು ಅವರ ಮನೆ ಹೊಂದಿದ್ದ ಭೂಮಿಯಿಂದ ತೆರವುಗೊಳಿಸಲಾಗಿತ್ತು. ಇದರಿಂದ ಅತಂತ್ರರಾದ ಚಂದ್ರಶೇಖರ್ ಸುಳ್ಯದ ವಕೀಲರೊಬ್ಬರ ಕಾರನ್ನು ಖರೀದಿಸಿ 2009ರ ಬಳಿಕ ಅದನ್ನು ಅರಂತೋಡು ಗ್ರಾಮದ ಬೆದ್ರುಪಣೆ ಎಂಬಲ್ಲಿ ಕಾಡಿನ ಬದಿ ರಸ್ತೆಯ ಪಕ್ಕ ನಿಲ್ಲಿಸಿ ಅದರಲ್ಲಿ ಜೀವನ ಆರಂಭಿಸಿದ್ದರು. ಕಾಡಿನಲ್ಲಿ ಬುಟ್ಟಿ ಹೆಣೆಯುವ ಕಾಯಕ ಮಾಡುತ್ತಿರುವ ಅವರು ಬುಟ್ಟಿಯೊಂದಕ್ಕೆ ತಲಾ 40 ರೂ.ನಂತೆ ದಿನವೊಂದಕ್ಕೆ 180 ರೂ. ದುಡಿಮೆ ಮಾಡುತ್ತಿದ್ದಾರೆ. ಇತ್ತೀಚೆಗೆ ಸುಳ್ಯಕ್ಕೆ ಜನತಾದರ್ಶನದ ವೇಳೆ ಚಂದ್ರಶೇಖರ್‌ರನ್ನು ಭೇಟಿಯಾದ ಜಿಲ್ಲಾಧಿಕಾರಿ, ಅವರಿಗೆ ಪುನರ್ವಸತಿ ಕಲ್ಪಿಸುವ ಭರವಸೆ ಒದಗಿಸಿದ್ದರು. ಅದರಂತೆ ಚಂದ್ರಶೇಖರ್‌ರ ಆರೋಗ್ಯ ತಪಾಸಣೆಯನ್ನೂ ನಡೆಸಲಾಗಿದೆ.
ಪುನರ್ವಸತಿಗೆ ಸೂಕ್ತ ವ್ಯವಸ್ಥೆ
ಸಹಕಾರಿ ಸಂಘದಿಂದ ಸಾಲ ಮರು ಪಾವತಿ ಪ್ರಕ್ರಿಯೆ ಕ್ರಮಬದ್ಧವಾಗಿದ್ದರೂ, ಹರಾಜು ಪ್ರಕ್ರಿಯೆಯಲ್ಲಿ ಮಾತ್ರ ಆತುರದ ಪ್ರಕ್ರಿಯೆ ನಡೆದಿದೆ. ಆದ್ದರಿಂದ ಚಂದ್ರಶೇಖರರಿಗೆ ಸಮಾಧಾನವಾಗುವ ನಿಟ್ಟಿನಲ್ಲಿ ಮುಂದಿನ ಕಾನೂನು ಕ್ರಮಕ್ಕೆ ಅವರಿಗೆ ಅಗತ್ಯ ನೆರವು ನೀಡಲಾಗುವುದು. ಅವರು ನಗರಕ್ಕೆ ಬಂದು ವಾಸಿಸಲು ಅವರನ್ನು ಮನವೊಲಿಕೆ ಮಾಡಲಾ ಗುವುದು. ಅಗತ್ಯವಿದ್ದಲ್ಲಿ ಉದ್ಯೋಗವನ್ನೂ ದೊರಕಿ ಸಿಕೊಡಲಾಗುವುದು.
-ಎ.ಬಿ.ಇಬಾಹೀಂ, ದ.ಕ. ಜಿಲ್ಲಾಧಿಕಾರಿ
ವ್ಯಕ್ತಿತ್ವದಲ್ಲಿ ತೊಂದರೆ
ಚಂದ್ರಶೇಖರ್‌ರ ಜೊತೆಗಿನ ಸುಮಾರು 45 ನಿಮಿಷಗಳ ಮಾತುಕತೆಯ ಸಂದರ್ಭ ಅವರ ವ್ಯಕ್ತಿತ್ವದಲ್ಲಿ ತೊಂದರೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದಕ್ಕಾಗಿ ಅವರನ್ನು ತಪಾಸಣೆಗೊಳಪಡಿಸಬೇಕಿದೆ. ಅವರು ಒಪ್ಪಿಕೊಂಡಲ್ಲಿ ಅವರಿಗೆ ಸೂಕ್ತ ರೀತಿಯ ಚಿಕಿತ್ಸೆ ಒದಗಿಸಿ ಅವರನ್ನು ಸಹಜ ಸ್ಥಿತಿಗೆ ತರಲು ಸಾಧ್ಯವಿದೆ ಎಂದು ಖ್ಯಾತ ಮಾನಸಿಕ ತಜ್ಞ ಡಾ.ರವೀಶ್ ತುಂಗಾ ಅಭಿಪ್ರಾಯಿ ಸಿದ್ದಾರೆ. ಚಂದ್ರಶೇಖರ್‌ರನ್ನು ಹೆಚ್ಚಿನ ವೈದ್ಯಕೀಯ ತಪಾ ಸಣೆಗೊಳಪಡಿಸುವ ನಿಟ್ಟಿನಲ್ಲಿ ಒಂದೆರಡು ದಿನ ಮಂಗಳೂರಿನಲ್ಲಿ ಇರುವಂತೆ ಅವರ ಮನವೊಲಿಕೆಗೆ ಸಭೆಯಲ್ಲಿದ್ದವರು ಪ್ರಯತ್ನಿಸಿದರಾದರೂ ಅವರು ಅದನ್ನು ಒಪ್ಪಿಕೊಳ್ಳಲಿಲ್ಲ.







