ಕಾರಾಗೃಹದಲ್ಲಿ ಐಟಂ ಡ್ಯಾನ್ಸ್ ಪ್ರಕರಣ; ಜೆಲು ಅಧೀಕ್ಷಕ ಅಮಾನತು: ಸಚಿವ ಪರಮೇಶ್ವರ್

ಬೆಂಗಳೂರು, ಜ.28: ವಿಜಯಪುರ ಕಾರಾಗೃಹದಲ್ಲಿ ಸನ್ನಡತೆ ಕೈದಿಗಳ ಬಿಡುಗಡೆ ವೇಳೆ ಯುವತಿಯಿಂದ ಐಟಂ ಡ್ಯಾನ್ಸ್ ಆಯೋಜಿಸಿದ್ದ ಪ್ರಕರಣ ಸಂಬಂಧ ಜೈಲಿನ ಅಧೀಕ್ಷಕ ಪಿ.ಎಸ್.ಅಂಬೇಕರ್ ಅವರನ್ನು ಅಮಾನತು ಮಾಡಿ, ಈ ಸಂಬಂಧ ಕೂಡಲೇ ತನಿಖೆ ನಡೆಸಲು ಕಾರಾಗೃಹ ಡಿಐಜಿ ಸತ್ಯನಾರಾಯಣರಾವ್ ಅವರಿಗೆ ಸೂಚಿಸಿದ್ದೇನೆ ಎಂದು ಗೃಹಸಚಿವ ಪರಮೇಶ್ವರ್ ತಿಳಿಸಿದರು.
ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸನ್ನಡತೆ ಕೈದಿಗಳ ಬಿಡುಗಡೆ ಸಂಭ್ರಮಾಚರಣೆಯಲ್ಲ. ಜೈಲಿನ ಅಧಿಕಾರಿಗಳು ತಪ್ಪು ಮಾಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಮನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದ್ದೇನೆ ಎಂದ ಅವರು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ವರ್ಗಾವಣೆ ಮಾಡಿಲ್ಲ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿಲ್ಲ. ಬದಲಿಗೆ ಆಡಳಿತಾತ್ಮಕ ದೃಷ್ಟಿಯಿಂದ ಅವರನ್ನು ಅನ್ಯ ಕಾರ್ಯನಿಮಿತ್ತ ಒಒಡಿ ಮೇಲೆ ಕಳುಹಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.
ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ ಸಂಬಂಧ ಮಾಧ್ಯಮಗಳ ವರದಿ ತಾನು ಗಮನಿಸಿದ್ದು, ಈ ಬಗ್ಗೆ ಸಚಿವ ಪರಮೇಶ್ವರ್ ನಾಯಕ್ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ಹೇಳಿದರು. ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ಒಒಡಿ ಮೇಲೆ ಕಳುಹಿಸುವ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳಲಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಅವರನ್ನು ವರ್ಗಾ ವಣೆ ಮಾಡಿಲ್ಲ ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.
ಮಾಹಿತಿ ನೀಡಿಲ್ಲ: ರಾಜ್ಯದಲ್ಲಿ ಐಸಿಸ್ ಸಂಘಟನೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಸಂಶಯದ ಮೇಲೆ ಬಂಧಿಸಿರುವ ಆರೋಪಿಗಳ ಬಗ್ಗೆ ಎನ್‌ಐಎ ರಾಜ್ಯದ ಪೊಲೀಸರೊಂದಿಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.
ಎಲ್ಲ ಧಾರ್ಮಿಕ ಸಂಸ್ಥೆಗಳು ಹಾಗೂ ಎಲ್ಲ ಸಮುದಾಯಗಳ ಯುವಕರಿಗೂ ಭಯೋತ್ಪಾದಕ ಸಂಘಟನೆಗಳಿಂದ ದೂರವಿರುವಂತೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದ ಸಚಿವರು, ಎನ್‌ಐಎ ಅಧಿಕಾರಿ ಗಳು ಕಳೆದ ಮೂರು ತಿಂಗಳಿಂದ ಪರಿಶೀಲನೆ ನಡೆಸಿ ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
‘ಇನೆ್ವಸ್್ಟ ಕರ್ನಾಟಕ’: ಫೆ.1ರಿಂದ ಖಾಸಗಿ ಬಸ್ ನಿಷೇಧ
‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಫೆ.1ರಿಂದ 10ರ ವರೆಗೆ ನಗರದಲ್ಲಿ ಖಾಸಗಿ ಬಸ್ ಸಂಚಾರ ನಿರ್ಬಂಧಿಸಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ಸುಮಾರು 1.50 ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕರು ಖಾಸಗಿ ಬಸ್‌ಗಳ ಮೂಲಕ ನಗರ ಪ್ರವೇಶಿಸುತ್ತಿದ್ದು, ಅವರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.







