ಶಿಂಷಾನದಿಗೆ ಉರುಳಿದ ಸಾರಿಗೆ ಬಸ್; ಓರ್ವ ಸಾವು, 35 ಪ್ರಯಾಣಿಕರಿಗೆ ಗಾಯ

ಮಂಡ್ಯ, ಜ.28: ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮದ್ದೂರು ಬಳಿ ಶಿಂಷಾ ನದಿಗೆ ಉರುಳಿ ಬಿದ್ದು, ಓರ್ವ ಮೃತಪಟ್ಟಿದ್ದು, 35 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಮದ್ದೂರು ತಾಲೂಕು ಹೆಬ್ಬೆರಳು ಗ್ರಾಮದ ಮರಲಿಂ ಗಯ್ಯ ಎಂಬವರ ಪುತ್ರ ರೈತ ರಾಮಕೃಷ್ಣ (50) ಮೃತಪಟ್ಟವರು.
ಘಟನೆಯಲ್ಲಿ ಪಾಂಡವಪುರದ ಮಂಗಳಮ್ಮ, ಭಾಗ್ಯಮ್ಮ, ಪಶ್ಚಿಮ ಬಂಗಾಳ ಮೂಲದ ಬುದ್ಧದೇವ್, ರಾಮನಗರ ತಾಲೂಕು ನಂಜಾಪುರದ ಎಸ್.ಶಿವಣ್ಣ, ಅಶ್ವತ್ಥ್‌ಕುಮಾರ್, ಪುಟ್ಟಸ್ವಾಮಿ, ಈಶ್ವರಾಚಾರ್, ಬೆಂಗಳೂರಿನ ಇಂದ್ರಯ್ಯ, ಮಾದಾಪುರದ ಈರಯ್ಯ, ಬಸರಾಳುವಿನ ಜೋಗಿಗೌಡ, ಮಂಡ್ಯದ ರಘುಕುಮಾರ್, ದಿವ್ಯಶ್ರೀ, ಮಂಜುಶ್ರೀ, ಮೈಸೂರಿನ ಕೆಸರೆಯ ರಾಘವೇಂದ್ರ, ಸೈಯದ್ ಅಹಮ್ಮದ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಸ್ ಚಾಲಕ ವಿರೂಪಾಕ್ಷ ಅವರ ಹೇಳಿಕೆ ಪ್ರಕಾರ, ಬಸ್‌ನ ಮುಂದಿನ ಎಡ ಭಾಗದ ಟಯರ್ ಒಡೆದಿದ್ದರಿಂದ ನಿಯಂತ್ರಣ ತಪ್ಪಿದ ಬಸ್ ಶಿಂಷಾ ನದಿಗೆ ಉರುಳಿದೆ. ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಸಾಗಿಸಲು ಸ್ಥಳೀಯ ಆ್ಯಂಬುಲೆನ್ಸ್‌ಗಳು ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳನ್ನು ಬಳಸಿಕೊಳ್ಳಲಾಯಿತು. ಗಾಯಾಳುಗಳನ್ನು ರಕ್ಷಿಸಲು ಪೊಲೀಸರ ಜತೆ ಸಾರ್ವಜನಿಕರು ಕೈಜೋಡಿಸಿದರು.
ಅಪಘಾತ ನಡೆದ ಸ್ಥಳದಲ್ಲಿ ಶಿಂಷಾನದಿಗೆ ಚೆಕ್‌ಡ್ಯಾಂ ನಿರ್ಮಿಸಿದ್ದು, ಈ ಚೆಕ್‌ಡ್ಯಾಂನಲ್ಲಿ ಹೂಳು ತುಂಬಿದ್ದ ಕಾರಣ ನೀರು ಕಡಿಮೆಯಿತ್ತು. ಇದರಿಂದಾಗಿ ಸುಮಾರು 25 ಅಡಿ ಆಳಕ್ಕೆ ಬಸ್ ಬಿದ್ದರೂ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ ಉರುಳಿದ ರಭಸಕ್ಕೆ ಪ್ರಯಾಣಿಕರು ಒಬ್ಬರ ಮೇಲೆ ಒಬ್ಬರು ಬಿದ್ದು ಮತ್ತು ಬಸ್‌ನೊಳಗಿನ ಕಂಬ,ಕಿಟಕಿಗೆ ಬಡಿದು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅಪಘಾತಕ್ಕೆ ಒಳಗಾದ ಈ ಬಸ್ಸು (ಕೆ.ಎ.13- ಎಫ್-1944) ಹಾಸನ ಜಿಲ್ಲೆಯ ರಾಮನಾಥಪುರ ಡಿಪೋಗೆ ಸೇರಿದ್ದು, ಚಾಲಕ ವಿರೂಪಾಕ್ಷ ಹಾಗೂ ನಿರ್ವಾಹಕ ಗೋವಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಬಸ್ ಅಪಘಾತದ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಬಸ್‌ನ ಗಾಜು ಒಡೆದು ಪ್ರಯಾಣಿಕರನ್ನು ರಕ್ಷಿಸಿ ಹೊರ ತರುವಲ್ಲಿ ಶ್ರಮಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಮಂಚೇಗೌಡ ಇತರ ಅಧಿಕಾರಿ ಗಳು ಭೇಟಿ ನೀಡಿದ್ದರು. ಸ್ಥಳೀಯ ಶಾಸಕ ಡಿ.ಸಿ.ತಮ್ಮಣ್ಣ ಮದ್ದೂರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಈ ಸಂಬಂಧ ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರಗಿಸಿದ್ದಾರೆ.





