ಮೋದಿ ಸಂಪುಟ ಸರ್ಜರಿ ಪ್ಲಾನ್ ಮತ್ತೆ ಮುಂದಕ್ಕೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ಸರ್ಜರಿ ಯೋಚನೆಯನ್ನು ಮತ್ತೆ ಮುಂದಕ್ಕೆ ಹಾಕಿದ್ದಾರೆ. ಈ ನಿರ್ಧಾರ ವಿವಾದದ ಕೇಂದ್ರಬಿಂದುಗಳಾಗಿರುವ ಸಚಿವರಿಗೆ ವರದಾನವಾಗಿ ಪರಿಣಮಿಸಿದೆ.
ಬುಧವಾರ ಕೇಂದ್ರ ಸಚಿವರ ಕ್ಷಮತೆಯ ಅವಲೋಕನ ಸಭೆಯ ಬಳಿಕ ಮೋದಿ ಈ ನಿರ್ಧಾರಕ್ಕೆ ಬಂದಿದ್ದು, ಈ ಸಂಬಂದ ಉನ್ನತ ವಲಯಗಳಿಗೆ ಸಂದೇಶವೂ ರವಾನೆಯಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಪ್ರತಿ ತಿಂಗಳ ಕೊನೆಯ ಬುಧವಾರ ನಡೆಯುವ ಈ ಮೌಲ್ಯಮಾಪನದಲ್ಲಿ ಈ ಬಾರಿ ಮೋದಿ ಕಠಿಣ ಸಂದೇಶಗಳನ್ನೂ ರವಾನಿಸಿದ್ದಾರೆ ಎನ್ನಲಾಗಿದೆ.
ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂಪುಟ ಕೈಗೊಂಡ 548 ನಿರ್ಣಯಗಳಲ್ಲಿ 458 ಅನುಷ್ಠಾನಕ್ಕೆ ಬಂದಿವೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ. ಸಚಿವರು ಉತ್ತಮ ಕೆಲಸ ಮುಂದುವರಿಸುವಂತೆ ಸೂಚಿಸಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಹಿರಿಯ ಸಚಿವರೊಬ್ಬರು ವಿವರಿಸಿದರು.
ಬಜೆಟ್ ಅಧಿವೇಶನದಲ್ಲಿ ಪ್ರಮುಖ ಮಸೂದೆಗಳಿಗೆ ಆಂಗೀಕಾರ ಪಡೆಯುವ ನಿಟ್ಟಿನಲ್ಲಿ ಗಮನ ಹರಿಸಿರುವುದರಿಂದ ಸಂಪುಟ ಪುನರ್ರಚನೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ.





