ಗುಜರಾತ್ 'ಭಯೋತ್ಪಾದನೆ' ಮಸೂದೆಯನ್ನು ಮೂರನೆ ಬಾರಿ ಹಿಂದಕ್ಕೆ ಕಳುಹಿಸಿದ ರಾಷ್ಟ್ರಪತಿ

ಹೊಸದಿಲ್ಲಿ, ಜ.29: ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾದ ಭಯೋತ್ಪಾದನೆ ಹಾಗೂ ಸಂಘಟಿತ ಅಪರಾಧ ನಿಯಂತ್ರಣದ ಗುಜರಾತ್ ಮಸೂದೆ- 2015 (ಜಿಸಿಟಿಒಸಿ)ನ್ನು ಮತ್ತೊಮ್ಮೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಿಂದಕ್ಕೆ ಕಳುಹಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಅನುಮೋದನೆಗೆ ಬಾಕಿ ಇರುವ ಈ ಮಸೂದೆ ಮೂರನೆ ಬಾರಿ ರಾಷ್ಟ್ರಪತಿ ಕಚೇರಿಯಿಂದ ಹಿಂದಕ್ಕೆ ಬಂದಿದೆ. ಈ ಮಸೂದೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರಾಷ್ಟ್ರಪತಿ ಬಯಸಿದ್ದಾರೆ. ಈ ಕಾರಣದಿಂದಾಗಿ ಮಸೂದೆಯನ್ನು ಹಿಂದಕ್ಕೆ ಕಳುಹಿಸಲಾಗಿದೆ.
ಜಿಸಿಟಿಒಸಿ ಮಸೂದೆ 2004 ಅನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಿರಸ್ಕರಿಸಿದ್ದರು. ಆಗ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಆಡಳಿತ ಇತ್ತು. ಅನಂತರ ಯುಪಿಎ ಆಡಳಿತ ಕಾಲದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರೂ 2008ರಲ್ಲಿ ಇದೇ ಕ್ರಮ ಅನುಸರಿಸಿದ್ದರು. ಹೀಗಿದ್ದೂ 2009ರಲ್ಲಿ ಮೂರನೇ ಬಾರಿಗೆ ಇದೇ ಮಸೂದೆಯ ಹೊಸ ಆವೃತ್ತಿಯನ್ನು ಗುಜರಾತ್ ಸರ್ಕಾರ ಸಲ್ಲಿಸಿದ್ದರೂ ಏನೂ ಆಗಿರಲಿಲ್ಲ. ಹೀಗಾಗಿ ಮೂರು ಬಾರಿ ರಾಷ್ಟ್ರಪತಿಗಳಿಂದ ತಿರಸ್ಕೃತಗೊಂಡ ಮಸೂದೆಯ ಹೊಸ ಆವೃತ್ತಿಯ ಬಗ್ಗೆ ಈಗ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಇನ್ನೂ ತೀರ್ಮಾನ ಕೈಗೊಂಡಿಲ್ಲ





