ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಕೋರ್ಸ್ಟ್ ಗಾರ್ಡ್‌ಗೆ ವಾಯುನೆಲೆ
ಮಂಗಳೂರು, ಜ.29: ಬಜಪೆಯಲ್ಲಿರುವ ಮಂಗಳೂರು ಹಳೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದಲ್ಲಿ 17000 ಚದರ ಅಡಿ ವಾಯುನೆಲೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಕಾರವು ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಿದೆ.
ಕೋಸ್ಟ್‌ಗಾರ್ಡ್ ತನ್ನ ವಿಮಾನಗಳನ್ನು ನೆಲೆಗೊಳಿಸಲು ಹಾಗೂ ಇತರ ಕಾರ್ಯಗಳಿಗಾಗಿ ವಾಯುನೆಲೆಯನ್ನು ಒದಗಿಸಿಕೊಡುವಂತೆ ಮಾಡಿರುವ ಬೇಡಿಕೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಕಾರ ಅಂಗೀಕರಿಸಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಳೆ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಪ್ರಸ್ತುತ ಪ್ರಯಾಣಿಕ ವಿಮಾನಗಳ ಕಾರ್ಯಾಚರಣೆ ನಡೆಯುತ್ತಿಲ್ಲ. ಪ್ರಸ್ತುತ ಕೊಚ್ಚಿ ಮತ್ತು ಪಣಜಿಯಲ್ಲಿ ತನ್ನ ವಾಯುನೆಲೆಯಲ್ಲಿ ಹೊಂದಿರುವ ಕೋಸ್ಟ್‌ಗಾರ್ಡ್ ಚೇತಕ್ ಹೆಲಿಕಾಪ್ಟರ್‌ಗಳನ್ನು ಇಲ್ಲೇ ಇಡುವ ವ್ಯವಸ್ಥೆಗೆ ಮುಂದಾಗಿದೆ. ಮಂಗಳೂರು ವಿಮಾನ ನಿಲ್ದಾಣ ಸಮುದ್ರ ತೀರಕ್ಕೆ ಸಮೀಪವಿರುವುದರಿಂದ ತುರ್ತು ಸಂದರ್ಭ ತಕ್ಷಣ ಕಾರ್ಯಾಚರಣೆಗೆ ಇದರಿಂದ ಅನುಕೂಲವಾಗಲಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕುರಿತು ಅಭಿಪ್ರಾಯಿಸಿರುವ ರಾಧಕೃಷ್ಣ, ಪ್ರಸಕ್ತ ಸಾಲಿನ ಪ್ರಥಮ 9 ತಿಂಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ 12.42 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಇದರಲ್ಲಿ 7.39 ಲಕ್ಷ ದೇಶೀಯ ಹಾಗೂ 5.02 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 20 ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.





