ಮುಗಿಯದ ಕಾಲ್ ಡ್ರಾಪ್ ಸಮಸ್ಯೆ : ಹುದ್ದೆಯಿಂದ ಡ್ರಾಪ್ ಆದ ಟೆಲಿಕಾಂ ಕಾಯದರ್ಶಿ

ಹೊಸದಿಲ್ಲಿ , ಜ . 29 : ಕೇಂದ್ರ ಟೆಲಿಕಾಂ ಕಾರ್ಯದರ್ಶಿ ರಾಕೇಶ್ ಗಾರ್ಗ್ ಅವರನ್ನು ವರ್ಗಾಯಿಸಲಾಗಿದೆ. ಸುದೀರ್ಘ ಸಮಯದಿಂದ ಮೊಬೈಲ್ ಗ್ರಾಹಕರನ್ನು ಕಾಡುತ್ತಿರುವ ಕಾಲ್ ಡ್ರಾಪ್ ಸಮಸ್ಯೆಯನ್ನು ಪರಿಹರಿಸಲು ವಿಫ಼ಲವಾಗಿರುವುದೇ ಅವರ ವರ್ಗಾವಣೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಅದರ ಜೊತೆಗೆ ಬ್ರಾಡ್ ಬ್ಯಾಂಡ್ ನೆಟ್ವರ್ಕ್, ಭಾರತ್ ನೆಟ್ ಪ್ರಾರಂಭದಲ್ಲಿ ವಿಳಂಬ ಹಾಗು ನೆಟ್ ಸ್ವಾತಂತ್ರ್ಯ ವಿಷಯದಲ್ಲಿ ಸ್ಪಷ್ಟತೆ ಕೊರತೆಯೂ ಅವರ ಎತ್ತಂಗಡಿಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.
ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಪ್ರಧಾನಿ ಸ್ಪಷ್ಟ ಆದೇಶ ನೀಡಿದ ಬಳಿಕವೂ ಅದು ಬಗೆಹರಿದಿರಲಿಲ್ಲ. ಜೊತೆಗೆ ಅವರ ಕಾರ್ಯ ವೈಖರಿಯ ಬಗ್ಗೆ ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೂ ತೃಪ್ತಿ ಇರಲಿಲ್ಲ. ಹಾಗಾಗಿ ಇಂದು ಹತ್ತು ಮಂದಿ ಪ್ರಮುಖ ಅಧಿಕಾರಿಗಳನ್ನು ಹೊಸ ಹುದ್ದೆಗಳಿಗೆ ನೇಮಿಸುವಾಗ ಗಾರ್ಗ್ ವರ್ಗಾವಣೆಯಾಗಿದ್ದಾರೆ. ಅವರು ಇನ್ನು ಮುಂದೆ ಅಲ್ಪ ಸಂಖ್ಯಾತ ಇಲಾಖೆಯ ಕಾರ್ಯದರ್ಶಿಯಾಗುತ್ತಾರೆ. ಅವರ ಜಾಗಕ್ಕೆ ಉತ್ತರ ಪ್ರದೇಷ ಕೆಡರ್ ನ ಜೆ. ಎಸ್ . ದೀಪಕ್ ಅವರನ್ನು ತರಲಾಗಿದೆ.
ಕೃಷಿ , ಮಾಹಿತಿ ತಂತ್ರಜ್ಞಾನ ಹಾಗು ಇನ್ನು ಕೆಲವು ಇಲಾಖೆಗಳಲ್ಲೂ ಪ್ರಧಾನಿ ಬದಲಾವಣೆ ಮಾಡಿದ್ದಾರೆ.





