ಬ್ರಿಟನ್ ತರುಣರು ಕನಿಷ್ಠ ಸಾಕ್ಷರತೆ ಹೊಂದಿದವರು: ಅಧ್ಯಯನ ವರದಿ
ಲಂಡನ್, ಜ. 29: ಅಭಿವೃದ್ಧಿ ಹೊಂದಿದ 23 ದೇಶಗಳ ಪೈಕಿ, ಇಂಗ್ಲಿಷ್ ಹದಿಹರೆಯದವರು ಅತ್ಯಂತ ಕನಿಷ್ಠ ಸಾಕ್ಷರತೆ ಹೊಂದಿದವರು ಹಾಗೂ ಲೆಕ್ಕದಲ್ಲಿ ಕೊನೆಯಲ್ಲಿ ಎರಡನೆಯ ಸ್ಥಾನ ಹೊಂದಿದವರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
16 ಮತ್ತು 19 ವರ್ಷಗಳ ನಡುವಿನ ತರುಣರು ಕೇವಲ ತಳಮಟ್ಟದ ಲೆಕ್ಕ ಮತ್ತು ಇಂಗ್ಲಿಷ್ ಜ್ಞಾನವನ್ನು ಹೊಂದಿದ್ದಾರೆ ಎಂದು ಆಪರೇಶನ್ ಫಾರ್ ಎಕನಾಮಿಕ್ ಕೋಆಪರೇಶನ್ ಆ್ಯಂಡ್ ಡೆವಲಪ್‌ಮೆಂಟ್ (ಒಇಸಿಡಿ) ನಡೆಸಿದ ಅಧ್ಯಯನ ಹೇಳಿದೆ.
ವಿಶ್ವವಿದ್ಯಾನಿಲಯಗಳ ಐವರು ವಿದ್ಯಾರ್ಥಿಗಳ ಪೈಕಿ ಓರ್ವ ತಳಮಟ್ಟದ ಸಮಸ್ಯೆಗಳನ್ನು ಬಿಡಿಸಬಹುದು, ಆದರೆ, ಸಂಕೀರ್ಣ ಸಮಸ್ಯೆಗಳನ್ನು ಬಿಡಿಸುವಾಗ ಪರದಾಡಬಹುದು ಎಂದು ಅಧ್ಯಯನ ಹೇಳುತ್ತದೆ.
‘‘ವಿಶ್ವವಿದ್ಯಾನಿಲಯದ ಕಲಿಕೆ ಕನಿಷ್ಠ ಮಟ್ಟದ ಸಾಕ್ಷರತೆ ಮತ್ತು ಲೆಕ್ಕದ ತಳಮಟ್ಟದ ಜ್ಞಾನಕ್ಕೆ ಸೀಮಿತ ಗಮನ ನೀಡುತ್ತದೆ. ಕನಿಷ್ಠ ಪರಿಣತಿ ಹೊಂದಿದ ಪದವೀಧರರು ತಮ್ಮ ವಿದ್ಯಾರ್ಹತೆಯಿಂದ ಸಾಧಾರಣ ಪ್ರತಿಫಲವನ್ನು ಪಡೆಯುತ್ತಾರೆ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಅವರಿಗೆ ತಮ್ಮ ಶಿಕ್ಷಣ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ’’ ಎಂಬ ನಿರ್ಧಾರಕ್ಕೆ ಅದು ಬಂದಿದೆ.
2012ರ ಅಂಕಿಅಂಶಗಳನ್ನು ಆಧರಿಸಿ ಹೇಳುವುದಾದರೆ, 18 ವರ್ಷ ವಯಸ್ಸಿನವರೆಗೆ ಮಕ್ಕಳನ್ನು ಶಿಕ್ಷಣದಲ್ಲೇ ಉಳಿಸಿಕೊಳ್ಳುವ ಮೈಕಲ್ ಗೋವ್‌ರ ಸುಧಾರಣಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ ಎಂಬುದನ್ನು ಅಧ್ಯಯನ ಒಪ್ಪಿಕೊಂಡಿದೆ.







