4 ತಾಸಿನಲ್ಲಿ 23 ಬಾರಿ ಹೃದಯ ಸ್ತಂಭನವಾಗಿ ಬದುಕುಳಿದ ಭೂಪ!

ಕೊಚ್ಚಿ, ಜ.29: ಅರುವತ್ತರ ಹರೆಯದ ಅಜಿತ್ ಎಂಬವರು (ಹೆಸರು ಬದಲಾಯಿಸಲಾಗಿದೆ) ತನ್ನ 7ರ ಹರೆಯದ ಮೊಮ್ಮಗನೊಂದಿಗೆ ಕ್ರಿಕೆಟ್ ಆಡುತ್ತಿರುವುದನ್ನು ನೋಡಿದರೆ, ಆ ಮನುಷ್ಯ 4 ತಾಸುಗಳ ಕಿರು ಅವಧಿಯಲ್ಲಿ 23 ಬಾರಿ ಹೃದಯಸ್ತಂಭನವಾದರೂ ಬದುಕಿದ್ದಾನೆಂದು ನಂಬುವುದು ಕಷ್ಟವಾದೀತು.
ಮಹಾ ಧೂಮಪಾನಿಯಾಗಿರುವ ಅಜಿತ್, ಭಾರೀ ಎದೆ ನೋವಾಗುತ್ತದೆಂದು ಹೇಳಿದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಇಸಿಜಿ ಮಾಡಿಸಿದಾಗ ಹೃದಯಾಘಾತವಾಗಿರುವುದನ್ನು ಸೂಚಿಸಿತು. ಅವರಿಗೆ ಚಿಕಿತ್ಸೆ ನೀಡುವ ಸತತ ಪ್ರಯತ್ನಗಳು ವಿಫಲವಾದವು. ಅನೇಕ ಬಾರಿ ಅಜಿತ್‌ರ ಹೃದಯ ಬಡಿತ ನಿಂತಿತ್ತು. ಸತತ ಹೃದಯ ಸ್ತಂಭನಗಳಿಂದಾಗಿ ರಕ್ತದ ಹರಿವಿನ ತಡೆಯನ್ನು ನಿವಾರಿಸಲಾಗದೆ ಆಸ್ಪತ್ರೆಯು ಅವರನ್ನು ಆ್ಯಸ್ಟರ್ ಮೆಡಸಿಟಿಗೆ ವರ್ಗಾಯಿಸಿತು.
ನಾಲ್ಕು ತಾಸುಗಳ ಅವಧಿಯಲ್ಲಿ 23 ಬಾರಿ ಹೃದಯ ಸ್ತಂಭನವಾಗಿ ಒಬ್ಬ ಬದುಕುಳಿದಿರುವ ಸಂಗತಿಯನ್ನು ಯಾರೂ ಕೇಳಲಾರರು. ನಿರ್ಣಾಯಕ ಚಿಕಿತ್ಸಾ ಅವಧಿ ಕಳೆದಿತ್ತು. ಈ ಜಟಿಲತೆಯೊಂದಿಗೆ ಇನ್ನಷ್ಟು ಅವರ ಹೃದಯ ಬಡಿತ ನಿಂತಿತ್ತು. ಅದನ್ನು ಅನೇಕ ಬಾರಿ ಪುನಶ್ಚೇತನಗೊಳಿಸಬೇಕಾಯಿತು.
ತಾವು ಸ್ಟೆಂಟಿಂಗ್ ಮೂಲಕ ರಕ್ತ ತಡೆಯನ್ನು ಸರಿಪಡಿಸಿದೆವು. ಹೃದಯಾಘಾತವು ಹೃದಯದ ಒಂದು ಭಾಗಕ್ಕೆ ರಕ್ತ ಪರಿಚಲನೆಯನ್ನು ತಡೆಯುತ್ತದೆ. ಆದರೆ, ಹೃದಯ ಬಡಿತ ನಡೆಯುತ್ತಿರುತ್ತದೆ. ಹೃದಯ ಸ್ತಂಭನವೆಂದರೆ ಹೃದಯ ಬಡಿತ ಸಂಪೂರ್ಣ ನಿಲ್ಲುವುದು. ಅದನ್ನು ಆಘಾತಗಳ ಮೂಲಕ ಪುನಶ್ಚೇತನಗೊಳಿಸಬೇಕಾಗುತ್ತದೆಂದು ಆ್ಯಸ್ಟರ್‌ಮೆಡ್‌ಸಿಟಿಯ ಹಿರಿಯ ಹೃದ್ರೋಗ ತ್ರಜ್ಞ ಡಾ.ಅನಿಲ್ ಕುಮಾರ್ ಆರ್.ವಿವರಿಸಿದ್ದಾರೆ.
ಅಜಿತ್ ಜೀವನದ ವೇಗವನ್ನು ನಿಧಾನಗೊಳಿಸಬೇಕು, ರಕ್ತ ಪರಿಚಲನೆ ಬಾಧಿತವಾಗಿದೆ. ಅವರ ಹೃದಯ ಕೇವಲ ಶೇ.30ರಷ್ಟು ರಕ್ತವನ್ನು ಪಂಪ್ ಮಾಡುತ್ತಿದೆ. ಆದರೆ, ರೋಗಿಯು ದೈನಂದಿನ ಕೆಲಸಗಳನ್ನು ಮಾಡಬಹುದು. ಅಜಿತ್ ಈಗ ಧೂಮಪಾನ ನಿಲ್ಲಿಸಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.
ತನಗೆ ನೀಡಲಾಗಿರುವ ಹೊಸ ಜೀವದಾನವನ್ನು ಗರಿಷ್ಠವಾಗಿ ಉಪಯೋಗಿಸಬಯಸಿದ್ದೇನೆ. ತಾನು ಪ್ರತಿದಿನ ಮುಂಜಾನೆ 20 ನಿಮಿಷ ನಡೆಯುತ್ತೇನೆ. ವೈದ್ಯರು ಹೇಳಿರುವ ಪಥ್ಯವನ್ನು ಮಾಡುತ್ತಿದ್ದೇನೆ. ಅದು ಅಷ್ಟು ಸುಲಭವಲ್ಲವಾದರೂ ದಿನ ಕಳೆದಂತೆ ತಾನು ಹೆಚ್ಚು ಹುರುಪನ್ನು ಅನುಭವಿಸುತ್ತಿದ್ದೇನೆಂದು ಅಜಿತ್ ಹೇಳಿದ್ದಾರೆ.







