ಮಹಿಳೆಗೆ ಜಿಪಂ ಟಿಕೆಟ್ ಆಮಿಷವೊಡ್ಡಿ ಅತ್ಯಾಚಾರ: ಬಿಜೆಪಿ ಮುಖಂಡನ ವಿರುದ್ಧ ಆರೋಪ

ಬೆಂಗಳೂರು, ಜ.29: ಮಹಿಳೆಯೊಬ್ಬರಿಗೆ ಜಿಲ್ಲಾ ಅಥವಾ ತಾಲೂಕು ಪಂಚಾಯತ್ ಟಿಕೆಟ್ ಕೊಡಿಸುವ ಆಮಿಷವೊಡ್ಡಿದ ಕೊಪ್ಪಳ ಜಿಲ್ಲೆ ಕುಷ್ಟಗಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಶಶಿಧರ ಕವಲಿ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಕುರಿತಂತೆ ಆರೋಪಗಳು ಕೇಳಿ ಬಂದಿವೆ.
ಕುಷ್ಟಗಿ ತಾಲೂಕು ಅಧ್ಯಕ್ಷ ಶಶಿಧರ ಕವಲಿ ಎಂಬ ವ್ಯಕ್ತಿ ಜಲಜಾ ಡವಳಿ(ಹೆಸರು ಬದಲಾಯಿಸಲಾಗಿದೆ) ಎಂಬಾಕೆಗೆ ಜಿಲ್ಲಾ ಅಥವಾ ತಾಲೂಕು ಪಂಚಾಯತ್‌ನ ಟಿಕೆಟ್ ಕೊಡಿಸುವೆ ಎಂದು ಆಮಿಷವೊಡ್ಡಿದ್ದಾನೆ. ಆ ಬಳಿಕ ಆಕೆಯನ್ನು ಹೊಸಪೇಟೆ ಸಮೀಪದಲ್ಲಿನ ರೆಸಾರ್ಟ್‌ಗೆ ಕರೆದೊಯ್ದು ಅಲ್ಲಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದು, ಆ ದೃಶ್ಯಗಳನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಹಿಡಿದುಕೊಂಡು ‘ನೀಚತನ’ ಮೆರೆದಿರುವುದಾಗಿ ಖಾಸಗಿ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿದೆ.
ಅಲ್ಲದೆ, ಆ ವಿಡಿಯೋದಲ್ಲಿನ ಹಸಿ-ಬಿಸಿ ತುಣುಕುಗಳು ವಾಟ್ಸ್‌ಆ್ಯಪ್‌ಗಳ ಮೂಲಕ ಕೊಪ್ಪಳ ಸೇರಿದಂತೆ ವಿವಿಧೆಡೆಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಮೊಬೈಲ್ ವೀಡಿಯೋದಲ್ಲಿರುವ ಮಹಿಳೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಕುಷ್ಟಗಿ ತಾಲೂಕಿನ ಕೊರಟಗೇರಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಿಳೆ, ಬಿಜೆಪಿಯ ಕುಷ್ಟಗಿ ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿಯೂ ಕೆಲಸ ಮಾಡುತ್ತಿದ್ದಳು. ಬಹಳ ದಿನಗಳ ಹಿಂದೆಯೇ ಕಾಮಕೇಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಮಹಿಳೆಗೆ ಟಿಕೆಟ್ ಇಲ್ಲ: ಪ್ರಹ್ಲಾದ್‌ಜೋಶಿ
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಟಿಕೆಟ್‌ಗಾಗಿ ನಡೆದಿದೆ ಎನ್ನಲಾದ ಕಾಮಕೇಳಿ ಹಿನ್ನೆಲೆಯಲ್ಲಿ ಆ ಮಹಿಳೆಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆ ಬಳಿಕ ತಾಲೂಕು ಅಧ್ಯಕ್ಷ ಸ್ಥಾನದಿಂದ ಶಶಿಧರ ಕವಳಿಯನ್ನು ವಜಾ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ಜೋಶಿ ಪ್ರತಿಕ್ರಿಯಿಸಿದ್ದಾರೆ.







