ಮೋದಿಯನ್ನು ಹೊಗಳಿದವರಿಗೆ ಪದ್ಮ ಪ್ರಶಸ್ತಿ: ಖಾದರ್ ಖಾನ್

ಮುಂಬೈ, ಜ.29: ತಾನು ಪ್ರಶಸ್ತಿ ಗಳಿಸದಿರುವುದೇ ಒಳ್ಳೆಯದಾಯಿತೆಂದು ಹಿರಿಯ ಸಿನಿಮಾ ನಟ ಖಾದರ್ ಖಾನ್ ಹೇಳಿಕೆ ನೀಡಿರುವುದು ಬಾಲಿವುಡ್‌ನಲ್ಲಿ ಮತ್ತೆ ರಾಜಕೀಯ ಚರ್ಚೆಯನ್ನು ಹುಟ್ಟಿಸಿ ಹಾಕಿದೆ. ಈ ವರ್ಷ ಪದ್ಮ ಪ್ರಶಸ್ತಿ ಶಿಫಾರಸು ಪಟ್ಟಿಯಲ್ಲಿ ಖಾದರ್ ಖಾನ್ ಹೆಸರು ಕೂಡ ಸೇರಿತು. ರಜನಿಕಾಂತ್, ಅನುಪಮ್ ಖೇರ್, ಪ್ರಿಯಾಂಕಾ ಚೋಪ್ರಾ, ಮಧುರ್ ಭಂಡಾರ್ಕರ್, ಎಸ್.ಎಸ್.ರಾಜವೌಳಿ, ಉದಿತ್ ನಾರಾಯಣ್, ಮಾಲಿನಿ ಅವಸ್ತಿ ಮುಂತಾದವರು ಈ ವರ್ಷ ಪದ್ಮ ಪ್ರಶಸ್ತಿಗಳನ್ನು ಪಡೆದವರಾಗಿದ್ದಾರೆ. ರಾಜಕೀಯ ನಾಯಕರನ್ನು ಹಾಡಿ ಹೊಗಳುವವರಿಗೆ ಈ ಬಾರಿ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದು ಅವರು ಅನುಪಮ್ ಖೇರ್ ಉಲ್ಲೇಖಿಸದೆಯೇ ವ್ಯಂಗ್ಯವಾಡಿದ್ದಾರೆ.
ಅವರು ತನಗೆ ಪ್ರಶಸ್ತಿ ನೀಡದಿರುವುದು ಒಳ್ಳೆಯದಾಯಿತು. ತಾನು ಜೀವಮಾನದಲ್ಲಿ ಯಾರದೇ ಮುಖಸ್ತುತಿ ಮಾಡಿಲ್ಲ ಎಂದೂ ಮಾಡುವುದಿಲ್ಲ. ಈ ವರ್ಷ ಪ್ರಶಸ್ತಿ ಗಳಿಸಿರುವ ಚಿತ್ರರಂಗದ ವ್ಯಕ್ತಿಗಳಿಗೆ ಅವುಗಳನ್ನು ಕೊಡುವುದಾದರೆ, ತಾನು ಅಂತಹ ಪ್ರಶಸ್ತಿಗಳನ್ನೇ ಬಯಸುವುದಿಲ್ಲವೆಂದು ಅವರು ಹೇಳಿದ್ದಾರೆ.
ಪ್ರಶಸ್ತಿಯಂದರೆ ದೊಡ್ಡ ವಿಷಯವೇನಲ್ಲ. ಆದರೆ, ಅದನ್ನು ನೀಡಲಾಗುವ ವ್ಯಕ್ತಿಯ ಮೇಲೆ ಅದರ ಪ್ರಾಮುಖ್ಯ ಅಡಗಿದೆ. ಮೊದಲು ಈ ಪ್ರಶಸ್ತಿಗಳಲ್ಲಿ ಒಂದು ರೀತಿಯ ಪ್ರಾಮಾಣಿಕತೆಯಿತ್ತು. ಆದರೆ, ಈಗ ಹಾಗಿಲ್ಲ. ಜನರೀಗ ಇತರರನ್ನು ಗೌರವಿಸುವುದನ್ನೇ ಮರೆತಿದ್ದಾರೆ. ಆದುದರಿಂದ ಸ್ವಾರ್ಥಿಗಳಿಗೆ ದಾರಿಯಾಗಿದೆಯೆಂದು ಖಾದರ್ ತನ್ನ ಅಸಹನೆ ಹೊರ ಹಾಕಿದ್ದಾರೆ.







