ಮೆಲ್ಬೋರ್ನ್‌ನಲ್ಲಿ ಧೋನಿ ಇನ್ನೊಂದು ದಾಖಲೆ

ಮೆಲ್ಬೋರ್ನ್, ಜ.29: ಆಸ್ಟ್ರೇಲಿಯ ವಿರುದ್ಧದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಆರಂಭಿಕ ದಾಂಡಿಗ ರೋಹಿತ್ ಶರ್ಮ ಮತ್ತು ಉಪನಾಯಕ ವಿರಾಟ್ ಕೊಹ್ಲಿ ಅರ್ಧಶತಕಗಳ ನೆರವಿನಲ್ಲಿ ಭಾರತ ತಂಡ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.
ಧೋನಿ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯದಲ್ಲಿ ಮೊದಲ ದ್ವಿಪಕ್ಷೀಯ ಸರಣಿ ಜಯಿಸಿದೆ.ಧೋನಿ ನಾಯಕತ್ವದ ಬಗ್ಗೆ ಅಪಸ್ವರ ಎದ್ದಿರುವಾಗಲೇ ಈ ಗೆಲುವು ಅವರಿಗೆ ಅನಿವಾರ್ಯವಾಗಿತ್ತು. ಕಳೆದ ವರ್ಷ ಧೋನಿ ನಾಯಕತ್ವದ ಟೀಮ್ ಇಂಡಿಯಾ ತ್ರಿಕೋನ ಸರಣಿಯಲ್ಲಿ ಸೋಲು ಅನುಭವಿಸಿತ್ತು. ಬಳಿಕ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮುಗ್ಗರಿಸಿತು.ಅಷ್ಟು ಮಾತ್ರವಲ್ಲ.ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕದಲ್ಲಿ ಸೋಲು ಅನುಭವಿಸಿತ್ತು. ಆಸ್ಟ್ರೇಲಿಯದಲ್ಲಿ ಟ್ವೆಂಟಿ-20 ಸರಣಿಗೆ ಮೊದಲು ಭಾರತ ಏಕದಿನ ಸರಣಿಯನ್ನು 1-4 ಅಂತರದಲ್ಲಿ ಕಳೆದುಕೊಂಡಿತ್ತು.
ಟ್ವೆಂಟಿ -20 ಸರಣಿಯಲ್ಲಿ ಸತತ ಗೆಲುವಿನೊಂದಿಗೆ ಭಾರತ ಸೋಲಿನ ಸರಮಾಲೆಯನ್ನು ಕಳಚಿಕೊಂಡಿದೆ. ರವಿವಾರ ನಡೆಯಲಿರುವ ಸರಣಿಯ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಜಯಿಸಿದರೆ ಭಾರತ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಲಿದೆ.
ಧೋನಿ ಇಂದು ನಡೆದ ಪಂದ್ಯದಲ್ಲಿ ಜೇಮ್ಸ್ ಫಾಕ್ನರ್‌ರನ್ನು ಸ್ಟಂಪ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲ ವಿಧಗಳ ಪಂದ್ಯಗಳಲ್ಲಿ ಒಟ್ಟು 140 ಸ್ಟಂಪಿಂಗ್ ದಾಖಲೆಯೊಂದಿಗೆ ಶ್ರೀಲಂಕಾದ ಕುಮಾರ ಸಂಗಕ್ಕರ (139)ದಾಖಲೆ ಮುರಿದರು.
34ರ ಹರೆಯದ ಧೋನಿ 90 ಟೆಸ್ಟ್‌ಗಳಲ್ಲಿ 38, 275ಏಕದಿನ ಪಂದ್ಯಗಳಲ್ಲಿ 89 ಮತ್ತು 54 ಟ್ವೆಂಟಿ-20 ಪಂದ್ಯಗಳಲ್ಲಿ 13 ಸ್ಟಂಪಿಂಗ್ ಮಾಡಿದ್ಧಾರೆ.
ಡಿಸೆಂಬರ್ 2004ರಲ್ಲಿ ಬಾಂಗ್ಲಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. 2014 ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ನಾಯಕರಾಗಿ ಮುನ್ನಡೆಸುತ್ತಿದ್ದಾರೆ.





