ಮುಂಬೈ ತೀರದಲ್ಲಿ ಭಾರೀ ಗಾತ್ರದ ತಿಮಿಂಗಿಲದ ಕಳೇಬರ ಪತ್ತೆ

ಮುಂಬೈ,ಜ.29: ಇಲ್ಲಿಯ ಜುಹು ಬೀಚ್‌ನಲ್ಲಿ 35 ಅಡಿ ಉದ್ದದ ತಿಮಿಂಗಿಲದ ಕಳೇಬರ ತೇಲಿಕೊಂಡು ಬಂದಿದೆ. ಗುರುವಾರ ರಾತ್ರಿ ಈ ಕಳೇಬರವನ್ನು ಕಂಡ ಸ್ಥಳೀಯರು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ತಿಮಿಂಗಿಲದ ಸಾವಿಗೆ ನಿಖರ ಕಾರಣವೇನು ಎನ್ನುವುದು ಮರಣೋತ್ತರ ಪರೀಕ್ಷೆಯ ಬಳಿಕವೇ ಗೊತ್ತಾಗಬೇಕಾಗಿದೆ.
ತಮಿಳುನಾಡಿನ ತಿರುಚೆಂಡೂರು ಸಮುದ್ರ ತೀರಕ್ಕೆ ಇತ್ತೀಚಿಗಷ್ಟೇ 38 ಮೃತ ತಿಮಿಂಗಿಲಗಳ ಕಳೇಬರಗಳು ತೇಲಿಕೊಂಡು ಬಂದಿದ್ದವು. ಇದೇ ವೇಳೆ ತೀರದ ಸಮೀಪ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ 250ಕ್ಕೂ ಅಧಿಕ ತಿಮಿಂಗಿಲಗಳನ್ನು ಮರಳಿ ಆಳ ಸಮುದ್ರಕ್ಕೆ ಸೇರಿಸಲಾಗಿತ್ತು. 2015,ಜೂನ್‌ನಲ್ಲಿ 42 ಅಡಿ ಉದ್ದದ ತಿಮಿಂಗಿಲವೊಂದು ಅಲಿಬಾಗ್ ಬಳಿಯ ರೇವದಂಡಾ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಅದಿನ್ನೂ ಜೀವಂತವಾಗಿದ್ದಾಗಲೇ ಅರಣ್ಯ ಇಲಾಖಾ ಅಧಿಕಾರಿಗಳು ಸಾಗರ ತಜ್ಞರನ್ನು ಸಂಪರ್ಕಿಸಿದ್ದರಾದರೂ ಅದು ಬಳಿಕ ಮೃತಪಟ್ಟಿತ್ತು.
Next Story





