ಪ್ರತಿಭಟನೆಯ ವೇಳೆ ಹಿಂಸಾಚಾರ ವಿಕಾಸಪುರಿ ಎಎಪಿ ಶಾಸಕನ ಬಂಧನ
ಹೊಸದಿಲ್ಲಿ, ಜ.29: ಲೈಂಗಿಕ ದೌರ್ಜನ್ಯ ಆರೋಪಿಯೊಬ್ಬನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯೊಂದರ ವೇಳೆ ಹಾಗೂ ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಸಹಿತ ವಿವಿಧ ಆರೋಪಗಳನ್ವಯ ವಿಕಾಸಪುರಿಯ ಎಎಪಿ ಶಾಸಕ ಮಹೀಂದರ್ ಯಾದವ್‌ರನ್ನು ಇಂದು ಬಂಧಿಸಲಾಗಿದೆ. ಇವರು ಬಂಧನಕ್ಕೊಳಗಾಗಿರುವ ದಿಲ್ಲಿಯ ಆಳುವ ಪಕ್ಷದ 6ನೆ ಶಾಸಕರಾಗಿದ್ದಾರೆ.
ಮೂರು ವರ್ಷ ಪ್ರಾಯದ ಬಾಲಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಪಶ್ಚಿಮ ದಿಲ್ಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ಯಾದವ್, ಹಿಂಸಾತ್ಮಕ ಪ್ರತಿಭಟನೆಯೊಂದರ ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರ ಗುಂಪು ಸಾರ್ವಜನಿಕ ವಾಹನಗಳ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಲು ಪ್ರಯತ್ನಿಸಿತ್ತೆಂದು ಪೊಲೀಸರು ಆರೋಪಿಸಿದ್ದಾರೆ.
30ರ ಹರೆಯದ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಪೊಲೀಸರು ಪ್ರಕರಣವನ್ನು ಪ್ರಾಮಾಣಿಕತೆಯಿಂದ ಮುಂದುವರಿಸುತ್ತಿಲ್ಲವೆಂದು ಆರೋಪಿಸಿದ್ದರು. ಆದರೆ, ಆರೋಪಿಯನ್ನು ಪ್ರತಿಭಟನೆಗೆ ಬಹಳ ಮೊದಲೇ ಬಂಧಿಸಲಾಗಿತ್ತೆಂದು ನೈಋತ್ಯ ವಿಭಾಗದ ಜಂಟಿ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್ ಇಂದು ಪ್ರತಿಪಾದಿಸಿದ್ದಾರೆ.
ನಿನ್ನೆ ರಾತ್ರಿ ಪ್ರಕರಣ ದಾಖಲಿಸಲಾಗಿತ್ತು. ಶಾಸಕನನ್ನು ಇಂದು ಮಧ್ಯಾಹ್ನ 12ರ ವೇಳೆ ದಂಗೆ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಸೇವಕರ ಮೇಲೆ ಹಲ್ಲೆ, ತಪ್ಪು ಪ್ರತಿರೋಧ ಹಾಗೂ ಸಾರ್ವಜನಿಕ ಆಸ್ತಿ ಹಾನಿ ಆರೋಪಗಳಲ್ಲಿ ಬಂಧಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.





