ರಾಮ ಜನ್ಮಭೂಮಿ: ಪ್ರಣವ್ ಅಭಿಪ್ರಾಯಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್
ಹೈದರಾಬಾದ್,ಜ.29: ಅಯೋಧ್ಯೆಯ ರಾಮ ಜನ್ಮಭೂಮಿ ನಿವೇಶನವನ್ನು ಸಾರ್ವಜನಿಕರ ಸಂದರ್ಶನಕ್ಕೆ ಮುಕ್ತಗೊಳಿಸಿದ್ದ ಆಗಿನ ಪ್ರಧಾನಿ ರಾಜೀವ್ ಗಾಂಧಿಯವರ ನಿರ್ಧಾರ ತಪ್ಪಿನಿಂದ ಕೂಡಿತ್ತು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ತನ್ನ ಆತ್ಮಚರಿತ್ರೆಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ಇಲ್ಲಿ ಅಸಮ್ಮತಿಯನ್ನು ವ್ಯಕ್ತಪಡಿಸಿದರು. ಆ ನಿರ್ಧಾರವು ರಾಜೀವ್ ಗಾಂಧಿಯವರದ್ದಾಗಿರಲಿಲ್ಲ,ಅದು ನ್ಯಾಯಾಲಯದ ತೀರ್ಪನ್ನು ಆಧರಿಸಿತ್ತು ಎಂದು ಅವರು ವಿವರಿಸಿದರು.
ನಿವೇಶನಕ್ಕೆ ಮುಕ್ತ ಪ್ರವೇಶಾವಕಾಶವನ್ನು ಕಲ್ಪಿಸಿದ್ದು ರಾಜೀವ್ ಗಾಂಧಿಯವರಲ್ಲ. ಅದು ನ್ಯಾಯಾಲಯದ ನಿರ್ಧಾರವಾಗಿತ್ತು. ಮಂದಿರ ನಿವೇಶನದಲ್ಲಿ ಶಿಲಾನ್ಯಾಸಕ್ಕೆ ಅನುಮತಿ ನೀಡಿದ್ದು ರಾಜೀವ್ ಗಾಂಧಿಯವರ ತಪ್ಪು ನಿರ್ಧಾರವಾಗಿಬಹುದು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಂಗ್ ನುಡಿದರು.
ನಿವೇಶನದ ಬಾಗಿಲುಗಳನ್ನು ತೆರೆಯುವ ರಾಜೀವ್ ನಿರ್ಧಾರ ತಪ್ಪಿನಿಂದ ಕೂಡಿತ್ತು ಮತ್ತು ಬಾಬರಿ ಮಸೀದಿ ಧ್ವಂಸವು ‘‘ಸಂಪೂರ್ಣ ವಿಶ್ವಾಸದ್ರೋಹ’’ದ ಕೃತ್ಯವಾಗಿದ್ದು,ಅದು ಭಾರತದ ಘನತೆಯನ್ನು ಹಾಳುಗೆಡವಿತ್ತು ಎಂದು ಪ್ರಣವ್ ಗುರುವಾರ ಬಿಡುಗಡೆಗೊಂಡ ತನ್ನ ಆತ್ಮಚರಿತ್ರೆಯ ಎರಡನೇ ಭಾಗ ‘‘ದಿ ಟರ್ಬುಲಂಟ್ ಇಯರ್ಸ್:1980-1996’’ನಲ್ಲಿ ಹೇಳಿದ್ದಾರೆ.
ಆದರೆ,ಬಾಬ್ರಿ ಮಸೀದಿ ಧ್ವಂಸವು ಆಗಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ‘‘ಅತ್ಯಂತ ದೊಡ್ಡ ವೈಫಲ್ಯ’’ವಾಗಿತ್ತು ಎನ್ನುವುದನ್ನು ಸಿಂಗ್ ಒಪ್ಪಿಕೊಂಡರು.





