ಕೇಂದ್ರ ಸರಕಾರದ ಕಾರ್ಯದರ್ಶಿಗಳ ವರ್ಗಾವರ್ಗಿ

ಹೊಸದಿಲ್ಲಿ, ಜ.29: ಉನ್ನತ ಮಟ್ಟದ ಅಧಿಕಾರಿಗಳ ಕಲಸುಮೇಲೋಗರವೊಂದರಲ್ಲಿ ದೂರಸಂಪರ್ಕ ಕಾರ್ಯದರ್ಶಿ ರಾಕೇಶ್ ಗರ್ಗ್‌ರನ್ನು ಶುಕ್ರವಾರ ಅಲ್ಪಸಂಖ್ಯಾತರ ವ್ಯವಹಾರ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ. ಅವರು ನಿವೃತ್ತಿಯಾಗಲು ಇನ್ನು ಕೇವಲ 10 ತಿಂಗಳುಗಳಷ್ಟೇ ಇವೆ.
ಜೆ.ಎಸ್. ದೀಪಕ್‌ರನ್ನು ದೂರಸಂಪರ್ಕ ಇಲಾಖೆಯ ಹೊಸ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಉತ್ತರಪ್ರದೇಶ ಕೇಡರ್‌ನ 1982ರ ಬ್ಯಾಚ್‌ನ ಐಎಎಸ್ ಅಧಿಕಾರಿ ದೀಪಕ್, ಹಾಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ.
1980ರ ಬ್ಯಾಚ್‌ನ ಐಎಎಸ್ ಅಧಿಕಾರಿ ಗರ್ಗ್ ರನ್ನು, ಹೆಚ್ಚುವರಿ ಹೊಣೆಯಲ್ಲಿದ್ದ ಅಮರೇಂದ್ರ ಸಿನ್ಹಾರ ಸ್ಥಾನದಲ್ಲಿ ಅಲ್ಪಸಂಖ್ಯಾತರ ವ್ಯವಹಾರ ಸಚಿವಾಲಯದ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಈ ಬಗ್ಗೆ ಸಿಬ್ಬಂದಿ ಸಚಿವಾಲಯದ ಶುಕ್ರವಾರ ಆದೇಶ ನೀಡಿದ್ದು, ಉನ್ನತ ಸ್ಥಾನಮಾನದ ಸಚಿವಾಲಯದಿಂದ ಗರ್ಗ್‌ರ ನಿರ್ಗಮನಕ್ಕೆ ಕಾರಣ ಉಲ್ಲೇಖಿಸಿಲ್ಲ.
2014ರ ಜುಲೈ 17ರಂದು ಗರ್ಗ್ ದೂರ ಸಂಪರ್ಕ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ನವೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ.
ಪ್ರಸ್ತುತ, ತನ್ನ ಕೇಡರ್ ರಾಜ್ಯ ಮಧ್ಯಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಅರುಣಾ ಶರ್ಮಾರನ್ನು, ದೀಪಕ್‌ರ ಸ್ಥಾನದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆಯೆಂದು ಆದೇಶ ತಿಳಿಸಿವೆ.
ವಿವಿಧ ಕೇಂದ್ರ ಸಚಿವಾಲಯಗಳು ಹಾಗೂ ಇತರ ಸಂಘಟನೆಗಳಿಗೆ ಸುಮಾರು 10 ಮಂದಿ ನೂತನ ಕಾರ್ಯದರ್ಶಿಗಳ ನೇಮಕವಾಗಿದೆ.
ಇಎಎಫ್‌ಒದಲ್ಲಿ ಕೇಂದ್ರೀಯ ಪ್ರಾವಿಡೆಂಟ್ ಫಂಡ್ ಆಯುಕ್ತರಾಗಿರುವ ಕೃಷ್ಣಕುಮಾರ್ ಜಲನ್, ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವಾಲಯದಲ್ಲಿ ಕಾರ್ಮಿಕರು ಮತ್ತು ನೇಮಕಾತಿ ಕಾರ್ಯದರ್ಶಿಯಾಗಲಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ನಿವೃತ್ತರಾಗಲಿರುವ ಕೃಷಿ, ಸಹಕಾರ ಹಾಗೂ ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಿರಾಜ್ ಹುಸೇನ್‌ರ ಸ್ಥಾನವನ್ನು ಶೋಭನಾ ಕೆ. ಪಟ್ನಾಯಕ್ ತುಂಬಲಿದ್ದಾರೆ.
1982ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅವಿನಾಶ್ ಕೆ. ಶ್ರೀವಾಸ್ತವರನ್ನು ಆಹಾರ ಸಂಸ್ಕರಣ ಸಚಿವಾಲಯದ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಅವರು ಸದ್ಯ ಕೃಷಿ, ಸಹಕಾರ ಹಾಗೂ ರೈತ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿದ್ದಾರೆ.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಕಾರ್ಯದರ್ಶಿ ವಿನೋದ್ ಅಗರ್ವಾಲರನ್ನು ಅಂಗವಿಕಲರ ಸಬಲೀಕರಣ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಕಾರ್ಯದರ್ಶಿ ಶ್ಯಾಮ್ ಎಸ್. ಅಗರ್ವಾಲ್, ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿಯಾಗಲಿದ್ದಾರೆ.
ಬುಡಕಟ್ಟು ವ್ಯವಹಾರ ಕಾರ್ಯದರ್ಶಿ ಅರುಣ್ ಝಾರನ್ನು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ನೂತನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಅಗರ್ವಾಲ್‌ರಿಗೆ ಮೂರು ತಿಂಗಳ ಅವಧಿಗೆ ಅಥವಾ ಕಾಯಂ ನೇಮಕಾತಿಯಾಗುವಲ್ಲಿವರೆಗೆ ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗದ ಹೆಚ್ಚುವರಿ ಹೊಣೆ ನೀಡಲಾಗಿದೆ.







