ಯುವತಿಯ ಕೊಲೆ ಪ್ರಕರಣ: ಫೆ.4ರಂದು ತೀರ್ಪು ಪ್ರಕಟ
ಕಾಸರಗೋಡು, ಜ.29: ಪ್ರೇಮಿಸಲು ನಿರಾಕರಿಸಿದ ಯುವತಿಯನ್ನು ಕತ್ತು ಕೊಯ್ದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣ ಗೊಂಡಿದ್ದು, ಫೆಬ್ರವರಿ ನಾಲ್ಕರಂದು ತೀರ್ಪು ಹೊರಬೀಳಲಿದೆ.
ಬಂಟ್ವಾಳ ಉಜಿರೆಕೆರೆಯ ಬಿ.ಎಂ ಉಮರ್ ಬ್ಯಾರಿ (33) 2006ರ ಡಿ.28ರಂದು ಕುಂಬಳೆ ಸಮೀಪದ ಉಜಾರು ಉಳುವಾರಿನ ಫಾತಿಮತ್ ಝುಹ್ರಾ(18)ಳನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ.
ಪ್ರೇಮ ನಿರಾಕರಣೆಯೇ ಕೃತ್ಯಕ್ಕೆ ಕಾರಣವಾಗಿದ್ದು, ಉಳುವಾರು ಮಸೀದಿಯ ತೋಟದಲ್ಲಿ ಕಾರ್ಮಿ ಕನಾಗಿ ದುಡಿಯುತ್ತಿದ್ದ ಈತ ಸಮೀಪದ ಫಾತಿಮತ್ ಝುಹ್ರಾಳನ್ನು ಮಧ್ಯರಾತ್ರಿ ಮಲಗಿದ್ದ ಸಂದರ್ಭ ಕೊಲೆಗೈದು ಪರಾರಿಯಾಗಿದ್ದನು. ಕೊಲೆಗೆ ಬಳಸಿದ್ದ ಚಾಕುವನ್ನು ಈತ ಕುಂಬಳೆಯ ಅಂಗಡಿಯಿಂದ ಖರೀದಿಸಿದ್ದಾಗಿ ತನಿಖೆಯಿಂದ ತಿಳಿದು ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮರುದಿನವೇ ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಈತ ಜಾಮೀನು ಪಡೆದು ಹೊರಬಂದ ಬಳಿಕ ತಲೆಮರೆಸಿ ಕೊಂಡಿದ್ದನು. 2014ರ ಅಗಸ್ಟ್ 28ರಂದು ಈತನನ್ನು ಮಹಾರಾಷ್ಟ್ರದ ನಾಸಿಕ್‌ನಿಂದ ಬಂಧಿಸಲಾಗಿತ್ತು. ನಾಸಿಕ್‌ನಲ್ಲಿ ಈತ ಗುತ್ತಿಗೆದಾರನಾಗಿ ಕೆಲಸ ನಿರ್ವಹಿಸುತ್ತಿದ್ದನು. ಪ್ರಕರಣದಲ್ಲಿ ಒಟ್ಟು 41 ಸಾಕ್ಷಿಗಳಿದ್ದಾರೆ ಎಂದು ತಿಳಿದು ಬಂದಿದೆ.





