ಶನಿ ವಿವಾದದಲ್ಲಿ ಮಧ್ಯಪ್ರದೇಶ ಗೃಹಸಚಿವ

ಭೋಪಾಲ್: ಮಹಿಳೆಯರು ಮೊದಲು ಮನೆಯಲ್ಲಿ ಪೂಜೆ ಮಾಡಲಿ ಎಂದು ಹೇಳಿಕೆ ನೀಡುವ ಮೂಲಕ ಮಧ್ಯಪ್ರದೇಶ ಗೃಹಸಚಿವ ಬಾಬೂಲಾಲ್ ಗೌರ್ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾಸ್ಥಳ ಶನಿ ಸಿಂಗನಾಪುರ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದದ ಬಗೆಗೆ ಗೌರ್ ಅವರ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಶನಿಸಿಂಗನಾಪುರ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು, "ಮಹಿಳೆಯರು ಮೊದಲು ಮನೆಯಲ್ಲಿ ಪೂಜೆ ಮಾಡಲಿ" ಎಂದು ಪ್ರತಿಕ್ರಿಯಿಸಿದರು.
ಕಳೆದ ಮಂಗಳವಾರ, ನಿಷೇಧಿತ ದೇಗುಲಕ್ಕೆ ಪ್ರವೇಶಿಸಲು ಭೂಮಾತಾ ರಣರಾಗಿಣಿ ಬ್ರಿಗೇಟ್ ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿದೆ. ಸ್ಥಳೀಯರು ಹಾಗೂ ಪೊಲೀಸರ ಜತೆಗಿನ ಸಂಘರ್ಷದ ಬಳಿಕವೂ ದೇವಾಲಯ ಪ್ರವೇಶಿಸುವ ಪ್ರಯತ್ನವನ್ನು ತಡೆಯಲಾಗಿತ್ತು.
ಈ ಲಿಂಗ ತಾರತಮ್ಯ ಕೊನೆಗೊಳಿಸಲು ಮಹಿಳೆಯರು ಇದೀಗ ಮುಖ್ಯಮಂತ್ರಿಯವರ ಮೊರೆ ಹೋಗಿದ್ದಾರೆ.
Next Story





