ಭಾರತಕ್ಕಿಲ್ಲ ಝಿಕಾ ವೈರಸ್ ಭೀತಿ

ನವದೆಹಲಿ: ಇಡೀ ವಿಶ್ವವನ್ನು ಬೆಚ್ಚಿಬೀಳಿಸಿದ ಝಿಕಾ ವೈರಸ್ ಭೀತಿ ಸದ್ಯಕ್ಕೆ ಭಾರತಕ್ಕಿಲ್ಲ. ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಿರೋಲಜಿ, ದೇಶದಲ್ಲಿ ಝಿಕಾ ಅಸ್ತಿತ್ವದಲ್ಲಿದೆಯೇ ಎಂಬ ಬಗ್ಗೆ ನಡೆಸಿರುವ ಎರಡು ಪರೀಕ್ಷೆಗಳಲ್ಲೂ ಋಣಾತ್ಮಕ ಫಲಿತಾಂಶ ಬಂದಿದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಜಗದೀಶ್ ಪ್ರಸಾದ್ ಪ್ರಕಟಿಸಿದ್ದಾರೆ.
ಇದೇ ವೇಳೆ, ಅಪರೂಪಕ್ಕೆ ಒಂದು ಪ್ರಕರಣವಾದರೂ ಇದೆಯೇ ಎಂದು ಪತ್ತೆ ಮಾಡಲು ಆರೋಗ್ಯ ಸಮೀಕ್ಷೆ ಕಾರ್ಯವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಸೊಳ್ಳೆಗಳಿಂದಲೇ ಹರಡುವ ಚಿಕೂನ್‌ಗುನ್ಯಾ ಹಾಗೂ ಡೆಂಗೆ ರೋಗದ ರಕ್ತ ಮಾದರಿಗಳನ್ನು ಝಿಕಾ ವೈರಸ್ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಫಲಿತಾಂಶ ಋಣಾತ್ಮಕವಾಗಿದೆ ಎಂದು ಸ್ಪಷ್ಟಪಡಿಸಿದರು.
ಅದಾಗ್ಯೂ ಸಚಿವಾಲಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಗರ್ಭಿಣಿ ಮಹಿಳೆಯರು, ಝಿಕಾ ಸೋಂಕು ಇರುವ ದೇಶಗಳಿಗೆ ಪ್ರಯಾಣ ಬೆಳೆಸಬಾರದು ಹಾಗೂ ಮಧುಮೇಹ, ಹೈಪರ್ ಟೆಕ್ಷನ್, ಉಸಿರಾಟ ಸಮಸ್ಯೆ, ಪ್ರತಿರೋಧ ಲಕ್ಷಣ ಇಳಿಕೆಯಂಥ ಸಮಸ್ಯೆ ಇರುವವರು ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.







