ಝಿಕಾ ಹೈ ಅಲರ್ಟ್ ; ವೈರಸ್ ಹರಡಿರುವ ದೇಶಗಳಿಗೆ ತೆರಳದಂತೆ ಭಾರತ ಎಚ್ಚರಿಕೆ

ಹೊಸದಿಲ್ಲಿ, ಜ.30: ಝಿಕಾ ವೈರಸ್ ಹರಡಿರುವ ದೇಶಗಳಿಗೆ ತೆರಳುವ ಪ್ರಯಾಣಿಕರು ಎಚ್ಚರವಹಿಸುವಂತೆ ಹಾಗೂ ಝಿ ವೈರಸ್ ಪ್ರಭಾವ ಇರುವ ಪ್ರದೇಶಗಳಿಗೆ ತೆರಳದಂತೆ ಗರ್ಭಿಣಿಯರಿಗೆ ಭಾರತ ಸೂಚನೆ ನೀಡಿದೆ.
ಈಗಾಗಲೇ ಲ್ಯಾಟಿನ್ ಅಮೆರಿಕದ ಸುಮಾರು ಇಪ್ಪತ್ತನಾಲ್ಕು ದೇಶಗಳಲ್ಲಿ ಝಿಕಾ ವೈರಸ್ ಹರಡಿದ್ದು ,ಈ ವೈರಸ್ ಮಕ್ಕಳ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಹಜಕ್ಕಿಂತ ಚಿಕ್ಕತಲೆಯ ಮಕ್ಕಳು ಜನಿಸುತ್ತಿದ್ದಾರೆ.ಕಳೆದ ಅಕ್ಟೋಬರ್‌ನಿಂದ ಸುಮಾರು 4,180 ಮೈಕ್ರೊಸೆಫಲಿಯ ಶಂಕಿತ ಪ್ರಕರಣಗಳು ವರದಿಯಾಗಿವೆ.
ಭಾರತದಲ್ಲಿ ಪ್ರತಿವರ್ಷ ಇಪ್ಪತ್ತಾರು ಮಿಲಿಯನ್ ಮಕ್ಕಳು ಜನಿಸುತ್ತಿದ್ದಾರೆ. ಸಹಸ್ರಾರು ಮಕ್ಕಳು ನಾನಾ ಸಮಸ್ಯೆಗಳಿಂದ ಈಗಾಗಲೇ ಬಳಲುತ್ತಿದ್ದಾರೆ. ಝಿಕಾ ವೈರಸ್ ಎಚ್ 1ಎನ್ 1(ಹಂದಿಜ್ವರ)ನಂತೆ ನೇರವಾಗಿ ಜನರಿಂದ ಜನರಿಗೆ ಹರಡುತ್ತಿಲ್ಲ. ಸೊಳ್ಳೆಗಳ ಮೂಲಕ ಝಿಕಾ ಹರಡುತ್ತಿದೆ.
ಮುಂದಿನ ವಾರ ಭಾರತದ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ದಕ್ಷಿಣ ಮತ್ತು ಕೇಂದ್ರ ಅಮೆರಿಕದಿಂದ ವಿಮಾನಗಳಲ್ಲಿ ಬಂದು ಇಳಿಯುವ ಪ್ರಯಾಣಿಕರನ್ನು ತಪಾಸಣೆ ಆರಂಭಗೊಳ್ಳಲಿದೆ. ಈಗಾಗಲೇ ಶ್ರೀಲಂಕಾದಲ್ಲಿ ಝಿಕಾ ವೈರಸ್ ಹರಡಿರುವ ದೇಶಗಳಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸುವ ಕಾರ್ಯ ಆರಂಭಗೊಂಡಿದೆ.





