ಮಹದಾಯಿ ವಿವಾದ; ನ್ಯಾಯಾಲಯದ ಅಂತಿಮ ತೀರ್ಪು ಬರುವ ತನಕ ಕಾಯಲು ಕೇಂದ್ರ ಸಚಿವೆ ಉಮಾಭಾರತಿ ಸಿಎಂಗೆ ಪತ್ರ

ಹೊಸದಿಲ್ಲಿ, ಜ.30: ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರು ಒದಗಿಸುವ ಮಹದಾಯಿ ನೀರು ಹಂಚಿಕೆಯ ವಿವಾದವನ್ನು ಮಾತುಕತೆಯ ಮೂಲಕ ಬಗೆ ಹರಿಸಲು ಸಾಧ್ಯವಿಲ್ಲ. ನ್ಯಾಯಾಲದ ಅಂತಿಮ ತೀರ್ಪು ಹೊರಬರುವ ತನಕ ಕಾಯುವಂತೆ ಕೇಂದ್ರ ಜಲ ಸಂಪನ್ನೂಲ ಖಾತೆ ಸಚಿವ ಉಮಾಭಾರತಿ ಅವರು ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಸಚಿವೆ ಉಮಾಭಾರತಿ " ನಿಮಗೆ ನ್ಯಾಯಾಂಗದ ವ್ಯವಸ್ಥೆಯ ಮೇಲೆ ನಂಬಿಕೆ ಇದೆ ಎಂದು ಭಾವಿಸಿದ್ದೇವೆ.ನ್ಯಾಯಾಲಯದ ಅಂತಿಮ ತೀರ್ಪು ಬರುವ ತನಕ ಕಾಯುವಿರಿ ಎಂಬ ವಿಶ್ವಾಸ ನನಗಿದೆ " ಎಂದು ತಿಳಿಸಿದ್ದಾರೆ.
ಈ ವಿವಾದವನ್ನು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರಕಾರಗಳ ನಡುವೆ ಮಾತುಕತೆಯ ಮೂಲಕ ಬಗೆಹರಿಸುವ ಪ್ರಸ್ತಾಪವನ್ನು ನಿರಾಕರಿಸಿರುವ ಸಚಿವೆ ಉಮಾಭಾರತಿ ಆ ರಾಜ್ಯಗಳು ಈ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ಉಮಾಭಾರತಿ ಪತ್ರದಲ್ಲಿ ಹೇಳಿದ್ದಾರೆ.
ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ದೃಷ್ಟಿಯಿಂದ ಕರ್ನಾಟಕದ ನಿಯೋಗದ ಭೇಟಿಗೆ ಸಮಯ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಶೇಕರ್ ಅವರಿಗೆ ಕಳೆದ ಡಿಸೆಂಬರ‍್ ನಲ್ಲಿ ಬರೆದಿದ್ದರು. ಇದೀಗ . ಗೋವಾಮುಖ್ಯ ಮಂತ್ರಿ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿವಾದವು ಮಹದಾಯಿ ನ್ಯಾಯಾಧಿಕರಣದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ನದಿ ತೀರದ ಕರ್ನಾಟಕ ಮತ್ತು ಗೋವಾ ರಾಜ್ಯಗಳು ಪರಸ್ಪರ ಮಾತುಕತೆ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎನ್ನುವುದು ಕರ್ನಾಟಕದ ಅಭಿಪ್ರಾಯವಾಗಿತ್ತು..
ಬರ ಪರಿಸ್ಥಿತಿಯಿಂದ ಸುಧಾರಿಸಿಕೊಳ್ಳಲು ಮಹದಾಯಿ ನದಿಯಿಂದ 7 ಟಿಎಂಸಿ ನೀರನ್ನು ತಕ್ಷಣ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಗದಗ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಳೆದ ಹಲವು ತಿಂಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಸಂಬಂಧ ಕಳದ ಆಗಸ್ಟ್ .24ರಂದು ರಾಜ್ಯದ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿ ವಿವಾದ ಬಗೆಹರಿಸಲು ಒತ್ತಾಯಿಸಿತ್ತು.
ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಜಲ ವಿವಾದಕ್ಕೆ ಸಂಬಂಧಿಸಿ 2011ರ ಕೇಂದ್ರ ಸರಕಾರದ ತೀರ್ಮಾನ ಮತ್ತು ಈ ಬಗ್ಗೆ ಕರ್ನಾಟಕ ಸಲ್ಲಿಸಿದ ಮೇಲ್ಮನವಿ ಎರಡೂ ಮಹದಾಯಿ ನ್ಯಾಯಾಧಿಕರಣದಲ್ಲಿ ವಿಚಾರಣೆಗೆ ಬಾಕಿ ಇದೆ. ನ್ಯಾಯಾಧಿಕರಣವು ವಿಚಾರಣೆಯನ್ನು 2016ರ ಫೆ.23ಕ್ಕೆ ನಿಗದಿಪಡಿಸಿದೆ





