ಐಸಿಸ್ ನಾಯಕರನ್ನು ಕೊಂದು ಹಾಕುತ್ತಿರುವ ಅಜ್ಞಾತ ಬಂದೂಕುಧಾರಿ!

ಲಿಬಿಯಾ: ತಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಮತ್ತು ಯಾವುದಾದರೊಂದು ಪ್ರದೇಶವನ್ನು ವಶಪಡಿಸಲು ಹೊರಟರೆ ಅದನ್ನು ವಶಪಡಿಸಿಯೇ ತೀರುತ್ತೇವೆ ಎನ್ನುವ ಐಸಿಸ್ ಭಯೋತ್ಪಾದಕರಿಗೆ ಲಿಬಿಯಾದಲ್ಲಿಇತ್ತೀಚೆಗೆ ದೊಡ್ಡದೊಂದು ಆತಂಕ ಎದುರಾಗುತ್ತಿದೆಯೆಂದು ವರದಿಯಾಗಿದೆ. ಲಿಬಿಯಾದಲ್ಲಿ ಅಜ್ಞಾತ ವ್ಯಕ್ತಿಯೊಬ್ಬ ಲಾಂಗ್ ರೇಂಜ್ ರೈಫಲ್ ಮೂಲಕ ತಮ್ಮಲ್ಲಿ ಒಬ್ಬೊಬ್ಬರನ್ನಾಗಿ ಕೊಲ್ಲುತ್ತಿರುವುದು ಅವರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಇದು ಲಿಬಿಯಾವನ್ನು ವಶಪಡಿಸಿಕೊಳ್ಳುವ ಅದರ ಪ್ರಯತ್ನಕ್ಕೆ ಹಿನ್ನಡೆ ತಂದೊಡ್ಡುತ್ತಿದೆ ಎನ್ನಲಾಗಿದೆ.
ಆಫ್ರಿಕಾದ ಉತ್ತರದ ಐಸಿಸ್‌ನ ಸ್ವಘೋಷಿತ ರಾಜಧಾನಿ ಸಿರ್ಟೆಯಲ್ಲಿ ಕಳೆದ ಕೆಲವು ವಾರಗಳಿಂದ ಪ್ರಮುಖ ಮೂರು ಐಸಿಸ್ ಕಮಾಂಡರ್‌ಗಳನ್ನು ಈ ಅಜ್ಞಾತ ವ್ಯಕ್ತಿ ಮರೆಯಲ್ಲೆಲ್ಲೋ ನಿಂತು ಲಾಂಗ್ ರೇಂಜ್ ಗನ್‌ನಿಂದ ಕೊಂದು ಹಾಕಿದ್ದಾನೆ. ಲಿಬಿಯದಲ್ಲಿ ಗದ್ದಾಫಿಯ ವಿರುದ್ಧ ದಂಗೆಯ ವೇಳೆ ಲಾಂಗ್ ರೇಂಜ್ ರೈಫಲ್ ಮೂಲಕ ಗುಂಡು ಹಾರಿಸುವ ಸಾಮರ್ಥ್ಯವನ್ನು ತಾನು ಅಭಿವೃದ್ಧಿಪಡಿಸಿಕೊಂಡಿದ್ದೇನೆಂದು ಆತ ಹೇಳಿಕೊಳ್ಳುತ್ತಿದ್ದಾನೆನ್ನಲಾಗಿದೆ. ಅತಿ ಕೊನೆಯಲ್ಲಿ ಐಸಿಸ್‌ನ ನಾಯಕರಾದ ಅಬ್ದುಲ್ಲ ಹಮದ್ ಅಲ್‌ಅನ್ಸಾರಿಯ ಮೇಲೆ ಆತ ಗುಂಡು ಹಾರಿಸಿ ಭೂಮಿಗುರುಳಿಸಿದ್ದಾನೆ. ಜನವರಿ 23ಕ್ಕೆ ಮಸೀದಿಯಿಂದ ಹೊರಬರುತ್ತಿದ್ದ ವೇಳೆ ಈ ಅಜ್ಞಾತನು ಗುಂಡಿಟ್ಟು ಅವನನ್ನು ಸಾಯಿಸಿದಾನೆ. ಅವರು ಐಸಿಸ್‌ನ ಶರಿಯಾ ಕೋರ್ಟು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಈ ಘಟನೆ ನಂತರ ಐಸಿಸ್ ನಾಯಕರಲ್ಲಿ ಒಬ್ಬೊಬ್ಬರೇ ಸಾಯಬೇಕಾದ ಹೆದರಿಕೆ ಸೃಷ್ಟಿಯಾಗಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಪ್ರಾದೇಶಿಕ ನ್ಯೂಸ್ ವೆಬ್‌ಸೈಟ್ ಅಲ್‌ವಸತ್‌ಗೆ ತಿಳಿಸಿದ್ದಾರೆ. ಯಾರು ಈ ವ್ಯಕ್ತಿಯೆಂದು ಐಸಿಸ್ ಹುಡುಕಾಟಕ್ಕಿಳಿದಿದ್ದರೂ ಪತ್ತೆಯಾಗಿಲ್ಲ. ಹುಡುಕಾಟದ ನಡುವೆಯೇ ಐಸಿಸ್ ಕಮಾಂಡರ್‌ಗಳಲ್ಲಿ ಒಬ್ಬೊಬ್ಬರೇ ಆತನ ಗುಂಡಿಗಾಹುತಿಯಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಐಸಿಸ್ ಈ ವ್ಯಕ್ತಿಯನ್ನು ಹುಡುಕುತ್ತಿದ್ದು ಶಂಕಿತರೆಂದು ಕಂಡು ಬರುವ ಅನೇಕರನ್ನು ಹಿಡಿದು ಕೊಲ್ಲುತ್ತಿದೆಯೆಂದು ವರದಿಯಾಗಿದೆ.ಆದರೆ ಆ ವ್ಯಕ್ತಿ ಐಸಿಸ್ ಕೈಗೆ ಈವರೆಗೂ ಸಿಕ್ಕಿಲ್ಲ. ಐಸಿಸ್ ವಿರುದ್ಧ ಹೋರಾಡುತ್ತಿರುವ ಅಮೆರಿಕ ಆಲ್ಲದಿದ್ದರೆ ಯುರೋಪಿಯನ್ ಸ್ಪೆಷಲ್ ಪೋರ್ಸ್‌ಗಳು ಲಿಬಿಯಾದಲ್ಲಿ ನಡೆಸುತ್ತಿರುವ ಮರೆಯುದ್ಧದ ಭಾಗ ಇದಾಗಿದೆಯೆಂದು ಊಹಾಪೋಹಗಳು ಹರಡಿದೆ. ಲಿಬಿಯಾದಲ್ಲಿ 1000ಮಂದಿಯ ಒಂದು ಬ್ರಿಟಿಷ್ ಗ್ರೂಪ್ ಇದ್ದು ಅವರು ಐಸಿಸ್‌ನ್ನು ಸದೆಬಡಿಯಲು ಯೋಜನೆ ರೂಪಿಸುತ್ತಿದ್ದಾರೆ.







