ಚೀನಾದ ಗಣಿಯಲ್ಲಿ ಸಿಲುಕಿಕೊಂಡ ನಾಲ್ವರು ಕಾರ್ಮಿಕರು 36 ದಿನಗಳ ಬಳಿಕ ಪವಾಡಸದೃಶ ಪಾರು !

ಬೀಜಿಂಗ್, ಜ.30: ಚೀನಾದ ಜಿಪ್ಸಮ್ ಗಣಿಯೊಂದರಲ್ಲಿ ಸಿಲುಕಿಕೊಂಡಿದ್ದ ನಾಲ್ವರು ಕಾರ್ಮಿಕರ ಪೈಕಿ ನಾಲ್ವರನ್ನು ಕಾರ್ಯಾಚರಣೆಯ ಮೂಲಕ ಮೂವತ್ತಾರು ದಿನಗಳ ಬಳಿಕ ಗಣಿಯಿಂದ ಹೊರತೆಗೆಯಲಾಗಿದ್ದು, ಅವರೆಲ್ಲರೂ ಪವಾಡಸದೃಶವಾಗಿ ಪಾರಾಗಿದ್ದಾರೆ.
ಚೀನಾದ ಶಾಂಗ್‌ಡಾಂಗ್ ಪ್ರಾಂತ್ಯದಲ್ಲಿರುವ ಪಿಂಗ್ಯಿನಲ್ಲಿದ್ದ ಜಿಪ್ಸಮ್ ಗಣಿಯಲ್ಲಿ ಕಳೆದ ಡಿ.25ರಂದು 29 ಮಂದಿ ಕಾರ್ಯ ನಿರತರಾಗಿದ್ದಾಗ, ಗಣಿ ಕುಸಿದುಬಿದ್ದಿತ್ತು. ಪರಿಣಾಮವಾಗಿ ಓರ್ವ ಮೃತಪಟ್ಟರೆ , 11 ಮಂದಿ ಕಾರ್ಮಿಕರನ್ನು ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿತ್ತು. ಹದಿನೇಳು ಮಂದಿ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಹದಿನೇಳು ಮಂದಿ ಕಾರ್ಮಿಕರ ಪೈಕಿ ನಾಲ್ವರನ್ನು ಶುಕ್ರವಾರ ರಾತ್ರಿ ಅವಶೇಷಗಳಡಿಯಿಂದ ಕಾರ್ಯಾಚರಣೆಯ ಮೂಲಕ ಪಾರು ಮಾಡಲಾಗಿದೆ.
ಝಾವೊ ಝಿಚೆಂಗ್(50), ಲಿ ಕ್ಯುಶೆಂಗ್(30), ಗುಯನ್ ಕಿಂಗಿಜಿ(55) ಮತ್ತು ಹುವಾ ಮಿಂಗಿಕ್ಸಿ(36) ಪವಾಡಸದೃಶ ಪಾರಾದವರು.
ಬದುಕುಳಿದ ನಾಲ್ವರು ಕಾರ್ಮಿಕರನ್ನು 200ಮೀಟರ್(660 ಅಡಿ) ಆಳದಿಂದ ಹೊರತೆಗೆಯಲಾಗಿದೆ.
2010ರಲ್ಲಿ ಇದೇ ರೀತಿ ಚಿಲಿಯಲ್ಲಿ ಗಣಿ ಕುಸಿತದಿಂದ ಸಿಲುಕಿಕೊಂಡಿದ್ದ 33 ಕಾರ್ಮಿಕರನ್ನು 69 ದಿನಗಳ ಬಳಿಕ ಪಾರು ಮಾಡಲಾಗಿತ್ತು. ಈ ದಾಖಲೆಗೆ ಚೀನಾದ ಗಣಿಯಲ್ಲಿ ನಾಲ್ಕು ಮಂದಿ ಬದುಕುಳಿದ ಪ್ರಕರಣ ಸೇರ್ಪಡೆಯಾಗಿದೆ.





