ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ 17ನೇ ವಾರ್ಷಿಕ ಕ್ರೀಡಾಕೂಟ

ದೇರಳಕಟ್ಟೆ: ಕಠಿಣ ಪರಿಶ್ರಮದಿಂದ ಉತ್ತಮ ಭವಿಷ್ಯ: ಕ್ಯಾ.ಗಣೇಶ್ ಕಾರ್ಣಿಕ್ ಕೊಣಾಜೆ: ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅದಕ್ಕೆ ಪೂರಕವಾದ ಕ್ರೀಡಾ ಚಟುವಟಿಕೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡರೆ ವ್ಯಕ್ತಿತ್ವದ ಬೆಳವಣಿಗೆಯೊಂದಿಗೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ವಿದಾನಪರಿಷತ್ ವಿರೋದ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಶನಿವಾರ ನಡೆದ ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ 17ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮತನಾಡಿದರು. ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪೈಪೋಟಿ ಇರುವುದನ್ನು ನಾವು ಗಮನಿಸಬಹುದು. ಇದಕ್ಕಾಗಿ ನಾವು ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಭವಿಷ್ಯದ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಬೇಕು. ಅಲ್ಲದೆ ಇಂತಹ ಕ್ರೀಡಾ ಚಟುವಟಿಕೆಗಳು ನಮ್ಮ ಬೆಳವಣಿಗೆಗೆ ಪೂರಕವಾಗಿದ್ದು ಇಂತಹ ಅವಕಾಶಗಳನ್ನು ಎಲ್ಲರೂ ಆಸಕ್ತಿಯಿಂದ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಪ್ರೊ.ಸತೀಶ್ ಕುಮಾರ್ ಭಂಡಾರಿ, ನಮ್ಮ ಭಾವನಾತ್ಮಕವಾದ ಬೆಳವಣಿಗೆಯಲ್ಲಿ ಕ್ರೀಡೆಯ ಪಾತ್ರ ಪ್ರಮುಖವಾದುದು. ಅದರಲ್ಲೂ ವೈದ್ಯ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಪೂರಕವಾಗಿ ಭಾಗವಹಿಸಿದರೆ ಮುಂದಿನ ಔದ್ಯೋಗಿಕ ರಂಗದಲ್ಲೂ ಉತ್ತಮ ವ್ಯಕ್ತಿತ್ವದೊಂದಿಗೆ ಜೀವನ ನಡೆಸಲು ಪರಿಣಾಮಕಾರಿಯಾಗುತ್ತದೆ. ಆದ್ದರಿಂದ ಕ್ರೀಡಾ ಸ್ಪೂರ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ,ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ರಿಜಿಸ್ಟ್ರಾರ್ ಡಾ.ಜಯಪ್ರಕಾಶ್ ಶೆಟ್ಟಿ, ಡಾ.ಅಮೃತ್ ಮಿರಾಜ್‌ಕರ್, ಕ್ರೀಡಾ ಸಲಹೆಗಾರರಾದ ಡಾ.ಮುರಲೀ ಕೃಷ್ಣ ವಿ, ದೈಹಿಕ ನಿರ್ದೇಶಕ ಕರುಣಾಕರ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.





