ಸೆರೆನಾಗೆ ಸೋಲುಣಿಸಿದ ಕರ್ಬರ್‌ಗೆ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಕಿರೀಟ

ಮೆಲ್ಬೋರ್ನ್, ಜ.30: ಜರ್ಮನಿಯ ನಂ.7 ಆಟಗಾರ್ತಿ ಏಂಜಲಿಕ್ ಛ ಅವರು ಇಂದು ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಟೆನಿಸ್‌ನ ಸಿಂಗಲ್ಸ್ ನಲ್ಲಿ ವಿಶ್ವದ ನಂ.1 ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ ಚೊಚ್ಚಲ ಗ್ರಾನ್ ಸ್ಲಾಮ್ ಕಿರೀಟ ಧರಿಸಿದ್ಧಾರೆ.
34ರ ಹರೆಯದ ಹಾಲಿ ಚಾಂಪಿಯನ್ ಸೆರೆನಾ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಏಳನೆ ಹಾಗೂ ಒಟ್ಟು 22ನ ಪ್ರಶಸ್ತಿ ಎತ್ತುವ ಪ್ರಯತ್ನ ನಡೆಸಿದ್ದರು. ಆದರೆ ಕರ್ಬರ್ ಅವರು ಅವಕಾಶ ನೀಡಲಿಲ್ಲ.
ಕರ್ಬರ್ ಅವರು ಸೆರನಾಗೆ 6-4, 3-6, 6-4 ಅಂತರದಿಂದ ಸೋಲಿಸಿ ಕನಸಿನ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಬಾಚಿಕೊಂಡರು.
ಇದರೊಂದಿಗೆ ಕರ್ಬರ್ ಅವರು 1999ರ ಬಳಿಕ ಈ ಪ್ರಶಸ್ತಿ ಜಯಿಸಿದ ಜರ್ಮನಿಯ ಮೊದಲ ಆಟಗಾರ್ತಿ ಎನಿಸಿಕೊಂಡರು. ಟೆನಿಸ್ ದಂತಕತೆ ಸ್ಪೆಫಿ ಗ್ರಾಫ್ 16 ವರ್ಷಗಳ ಮೊದಲು ಕೊನೆಯ ಬಾರಿ ಪ್ರಶಸ್ತಿ ಎತ್ತಿದ್ದರು. ಅವರ ಬಳಿಕ ಇದೀಗ ಕರ್ಬರ್ ಈ ಸಾಧನೆ ಮಾಡಿದ್ಧಾರೆ.
ಏಳನೆ ಶ್ರೇಯಾಂಕದ ಕರ್ಬರ್ ಮೊದಲ ಸೆಟ್‌ನಲ್ಲಿ ಬಲಿಷ್ಠ ಆಟಗಾರ್ತಿ ಸೆರೆನಾ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಬಳಿಕ ಎರಡು ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದರು.
ಸೆರೆನಾ ಆಟದ ವೇಳೆ ಮಾಡಿದ ತಪ್ಪುಗಳಿಂದಾಗಿ ಗ್ರಾನ್ ಸ್ಲಾಮ್ ಕೈತಪ್ಪಿತು. ಎಚ್ಚರಿಕೆಯಿಂದಲೇ ಆಡಿದ ಕರ್ಬರಾ ಅವರು ಸೆರೆನಾಗೆ ಅನಿರೀಕ್ಷಿತ ಆಘಾತ ನೀಡಿದರು.
ಸೆರೆನಾ ವಿಲಿಯಮ್ಸ್ ಗೆಲ್ಲುವ ಎಲ್ಲ ಅವಕಾಶ ಇದ್ದರೂ ಕಳಪೆ ಆಟದಿಂದಾಗಿ ಪ್ರಶಸ್ತಿ ಕೈ ಚೆಲ್ಲಿದರು.
ಆರರಲ್ಲಿ ಒಂದು ಜಯ: ಒಟ್ಟು ಆರು ಪಂದ್ಯಗಳಲ್ಲಿ ಕರ್ಬರ್ ಮತ್ತು ವಿಲಿಯಮ್ಸ್ ಮುಖಾಮುಖಿಯಾಗಿದ್ದರು. ಈ ಪೈಕಿ ಇದೀಗ ಮೊದಲ ಬಾರಿ ಸೆರಾನರಿಗೆ ಕರ್ಬರ್ ಸೋಲುಣಿಸಿದ್ದಾರೆ.
ಎರಡು ಗಂಟೆ ಮತ್ತು ಎಂಟು ನಿಮಿಷಗಳ ಕಾಲ ಇವರ ನಡುವೆ ಸೆಣಸಾಟ ನಡೆಯಿತು. ಆಟದ ವೇಳೆ ಸೆರೆನಾ 46 ಮತ್ತು ಕರ್ಬರ್ ಅವರಿಂದ 13 ತಪ್ಪುಗಳು ಕಂಡು ಬಂತು.
ಸೆರನಾ ಮೊದಲ ಸೆಟ್‌ನಲ್ಲಿ ಜಯ ಮೇಲುಗೈ ಸಾಧಿಸಿದ್ದರೂ 23 ತಪ್ಪು ಹಜ್ಜೆಗಳು ಆಕೆಯಿಂದ ಕಂಡು ಬಂತು. ಕಳೆದ ಸೆಪ್ಪಂಬರ್‌ನಲ್ಲಿ ಸೆರೆನಾ ಅವರು ಇಟಲಿಯ ರೊಬೆರ್ಟ್ ವಿನ್ಸಿ ವಿರುದ್ಧ ಇದೇ ರೀತಿ ಪ್ರದರ್ಶನ ನೀಡಿದ್ದರು.
ಕನಸು ನನಸಾಯಿತು: ‘‘ ಈಗ ನನ್ನ ಕನಸು ನನಸಾಗಿದೆ. ಇದಕ್ಕಾಗಿ ಜೀವನವಿಡೀ ಶ್ರಮಿಸಿದ್ದೆ. ಸೆರೆನಾ ವಿಲಿಯಮ್ಸ್‌ರನ್ನು ಸೋಲಿಸಿ ಪ್ರಶಸ್ತಿ ಜಯಿಸಿರುವುದಕ್ಕೆ ಸಂತಸವಾಗುತ್ತಿದೆ’’ ಆಸ್ಟ್ರೇಲಿಯನ್ ಓಪನ್ ನೂತನ ಚಾಂಪಿಯನ್ ಕರ್ಬರ್ ಅಭಿಪ್ರಾಯಪಟ್ಟಿದ್ದಾರೆ.
‘‘ ಏಂಜಿ ನಿಮಗೆ ಅಭಿನಂದನೆಗಳು. ಇದು ನಿಮಗೆ ಸಲ್ಲಬೇಕಾದ ಪ್ರಶಸ್ತಿ. ನಾನು ಸಂತಸಗೊಂಡಿರುವೆ. ನೀವು ಗೆಲುವಿನ ಕ್ಷಣವನ್ನು ಸಂಭ್ರಮಿಸುವಿರಿ ಎಂದು ಭಾವಿಸುವೆ’’ ಎಂದು ಸೆರೆನಾ ವಿಲಿಯಮ್ಸ್ ಹೇಳಿದ್ಧಾರೆ.
‘‘ ನಾನೇನು ರೊಬೆಟ್ ಅಲ್ಲ. ಗೆಲುವಿಗೆಗೆ ಪ್ರಯತ್ನ ನಡೆಸಿದೆ. ಆದರೆ ಸಾಧ್ಯವಾಗಲಿಲ್ಲ. ಇನ್ನೊಬ್ಬರು ಗೆಲ್ಲುವಂತಾಯಿತು’’ ಎಂದು ಸೆರೆನಾ ಅಭಿಪ್ರಾಯಪಟ್ಟರು.





