ಸುಳ್ಯ: ರೆಂಜಾಳ ಅನ್ನಪೂರ್ಣ ಸಮಿತಿಯ ದಶಮಾನೋತ್ಸವ,

ಸುಳ್ಯ: ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ಅನ್ನಪೂರ್ಣ ಸಮಿತಿಯ ದಶಮಾನೋತ್ಸವ ದೇವಸ್ಥಾನದಲ್ಲಿ ನಡೆಯಿತು.
ದೇವಳದಲ್ಲಿ ಅನ್ನಪೂರ್ಣ ಸಮತಿ ರಚನೆಗೊಂಡು ಹತ್ತು ವರ್ಷವಾದ ಸಂಭ್ರಮದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕುಂಟಾರಿನ ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಹಾಗಿದ್ದೂ ಸನಾತನ ಧರ್ಮಕ್ಕೆ ಅದಕ್ಕಿಂತಲೂ ಹೆಚ್ಚಿನ ಶಕ್ತಿ ಇದೆ. ಹಾಗಾಗಿ ಅದನ್ನು ಮೀರಲು ಭೌತಿಕ ಶಕ್ತಿಗಳಿಂದ ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಆಂತರಿಕ ಶಕ್ತಿಯನ್ನು ನಿರ್ನಾಮ ಮಾಡುವುದು ಕೇವಲ ಕನಸು ಮಾತ್ರ ಎಂದ ಅವರು, ಸಾತ್ವಿಕ ಶಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮತ್ತು ಅದನ್ನು ಉಳಿಸುವ ಕೆಲಸ ಆಗಬೇಕಾಗಿದೆ ಎಂದರು.
ಅತಿಥಿಯಾಗಿದ್ದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ ಮಾತನಾಡಿ, ರೆಂಜಾಳದ ಬ್ರಹ್ಮಕಲಶೋತ್ಸವ ವ್ಯವಸ್ಥಿತ ಕಾರ್ಯಕ್ರಮ. ಎಲ್ಲಾ ಭಕ್ತರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಅನ್ನಪೂರ್ಣ ಸಮಿತಿ ಹಾಗೂ ನಿತ್ಯನಿಧಿ ಸಂಗ್ರಾಹಕರನ್ನು ಗೌರವಿಸಲಾಯಿತು. ದೇವಸ್ಥಾನಕ್ಕೆ ಮರ ನೀಡಿದವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಲು ದೇವಸ್ಥಾನಗಳ ನಿರ್ಮಾಣ ಮಾಡಲಾಗುತ್ತದಿದೆ. ಬ್ರಹ್ಮಕಲಶೋತ್ಸವದ ಬಳಿಕ ಹಲವು ದೇವಸ್ಥಾನಗಳು ಬಿಕೋ ಎನ್ನುತ್ತಿವೆ. ದೇವಸ್ಥಾನಕ್ಕೆ ನಿತ್ಯ ಬರುವುದರೊಂದಿಗೆ ಮಕ್ಕಳನ್ನು ಕರೆತಂದು ಅವರಲ್ಲೂ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಆಶಾ ತಿಮ್ಮಪ್ಪ ಹೇಳೀದರು.
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಈಶ್ವರಪ್ಪ ಗೌಡ, ಮರ್ಕಂಜದ ಸೇವಾನಿರತ ಬಾಲಕೃಷ್ಣ ಬಲ್ಯಾಯ ಅತಿಥಿಗಳಾಗಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಶಾಸ್ತ್ರಿ ದೋಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅನ್ನಪೂರ್ಣ ಸಮಿತಿ ಸಲಹೆಗಾರ ಸುಬ್ರಹ್ಮಣ್ಯ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬೋಜಪ್ಪ ಗೌಡ ಕೊಚ್ಚಿ, ವನಜಾಕ್ಷಿ, ಅರ್ಚಕ ರಾಮಚಂದ್ರ ಶಿಬರಾಯ ವೇದಿಕೆಯಲ್ಲಿದ್ದರು.
ಮಂಜಪ್ಪ ಗೌಡ ಕಾಡುತೋಟ ಸ್ವಾಗತಿಸಿ, ಮೋನಪ್ಪ ಪೂಜಾರಿ ವಂದಿಸಿದರು. ಕಿರಣ್ ಗುಡ್ಡೆಮನೆ, ರಾಮಚಂದ್ರ ಹಲ್ದಡ್ಕ ಕಾರ್ಯಕ್ರಮ ನಿರೂಪಿಸಿದರು.







