ಮಂಗಳೂರು : ಕೇಸು ಬೇಗ ಮುಗಿಯಬೇಕೇ? ರಾಷ್ಟ್ರೀಯ ಜನತಾ ನ್ಯಾಯಾಲಯಕ್ಕೆ ಬನ್ನಿ
ಮಂಗಳೂರು ಜನವರಿ 30 : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು. ಮಂಗಳೂರು ವಕೀಲರ ಸಂಘ, ಮಂಗಳೂರು ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಾಸಿಕ ರಾಷ್ಟ್ರೀಯ ಜನತಾ ನ್ಯಾಯಾಲಯ 2016ರ ವರ್ಷವಿಡೀ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ವಿಷಯಗಳ ಬಗ್ಗೆ ಹಮ್ಮಿಕೊಳ್ಳಲಾಗಿದೆ.
ಫೆ. 13ರಂದು ಬ್ಯಾಂಕಿನ ವಿಷಯಗಳು ಕಲಂ-138 ಎನ್.ಐ. ಕಾಯ್ದೆ, ಹಣ ವಸೂಲಾತಿ ದಾವೆಗಳು (ಚಾಲ್ತಿಯಲ್ಲಿರುವ ವ್ಯಾಜ್ಯಗಳು ಮತ್ತು ವ್ಯಾಜ್ಯ ಪೂರ್ವ ವಿಷಯಗಳು), ಮಾರ್ಚ್ 12- ಸಿವಿಲ್ ಮತ್ತು ಕಂದಾಯ ಪ್ರಕರಣಗಳು, ಏಪ್ರಿಲ್ 9- ಕಾರ್ಮಿಕ ಮತ್ತು ಕೌಟುಂಬಿಕ ವಿಷಯಗಳು, ಮೇ 14 ಅಥವಾ ಜೂನ್ 11- ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು ಮತ್ತು ವಿಮಾ ಕ್ಲೆಮುಗಳು (ನ್ಯಾಯಾಲಯದ ಬೇಸಿಗೆ ರಜೆಗೆ ಸರಿಹೊಂದುವಂತೆ ನಿಗದಿ ಪಡಿಸಲಾಗುವುದು), ಜುಲೈ 9- ವಿದ್ಯುಚ್ಛ್ಛಕ್ತಿ/ ನೀರು/ ದೂರವಾಣಿ/ ಸಾರ್ವಜನಿಕ ಉಪಯುಕ್ತ ಸೇವೆಗಳ ವ್ಯಾಜ್ಯಗಳು, ಆಗಸ್ಟ್ 13- ಗ್ರಾಹಕರ ವ್ಯಾಜ್ಯಗಳು/ ತೆರಿಗೆ ವಿಷಯಗಳು, ಬ್ಯಾಂಕಿನ ವಿಷಯಗಳು, ಕಲಂ-138 ಎನ್.ಐ. ಕಾಯ್ದೆ, ಹಣ ವಸೂಲಾತಿ ದಾವೆಗಳು (ಚಾಲ್ತಿಯಲ್ಲಿರುವ ವ್ಯಾಜ್ಯಗಳು ಮತ್ತು ವ್ಯಾಜ್ಯ ಪೂರ್ವ ವಿಷಯಗಳು), ಸೆಪ್ಟಂಬರ್ 10- ರಾಜೀಯಾಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳು, ಅಕ್ಟೋಬರ್ 8- ಸಂಚಾರಿ, ಲಘು ಪ್ರಕರಣಗಳು, ಮುನ್ಸಿಪಲ್ ಪ್ರಕರಣಗಳು, ನವೆಂಬರ್-ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಜನತಾ ನ್ಯಾಯಾಲಯ.
ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯವನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಬಹುದು. ಜನತಾ ನ್ಯಾಯಾಲಯದಲ್ಲಿ ಪ್ರಕರಣದ ಕಕ್ಷಿದಾರರು ನೇರವಾಗಿ ಭಾಗವಹಿಸಬಹುದು ಮತ್ತು ವಕೀಲರ ಮೂಲಕವೂ ಭಾಗವಹಿಸಬಹುದಾಗಿದೆ. ಉಭಯ ಪಕ್ಷಕಾರರ ಪರಸ್ಪರ ಒಪ್ಪಿಗೆಯ ಮೇರೆಗೆ ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಸೌಹಾರ್ಧಯುತವಾಗಿ ಪ್ರಕರಣವು ಇತ್ಯರ್ಥಗೊಳ್ಳುವುದರಿಂದ ಬಾಂಧವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳುತ್ತದೆ.
ಈ ಜನತಾ ನ್ಯಾಯಾಲಯದಲ್ಲಿ ಈಗಾಗಲೇ ನ್ಯಾಯಾಲಯದಲ್ಲಿ ಚಾಲ್ತಿಯಿರುವ ಮತ್ತು ನ್ಯಾಯಾಲಯಕ್ಕೆ ಇನ್ನೂ ಬಾರದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು. ಕಡಿಮೆ ಖರ್ಚು, ಶೀಘ್ರ ವಿಲೇವಾರಿಗಾಗಿ ಇದೊಂದು ವಿಶೇಷ ಅವಕಾಶ. ಈ ಮಾಸಿಕ ಜನತಾ ನ್ಯಾಯಾಲಯದ ಪ್ರಯೋಜನವನ್ನು ಬ್ಯಾಂಕುಗಳು, ಹಣಕಾಸಿನ ಸಂಸ್ಥೆಗಳು, ವಿಮಾ ಕಂಪನಿಗಳು, ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಕಕ್ಷಿದಾರರುಗಳು ಹಾಗೂ ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಲು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.







