ಸುಳ್ಯ:ವಿದ್ಯುತ್ ಅವ್ಯವಸ್ಥೆಗೆ ಸರಕಾರವೇ ಹೊಣೆ : ಅಂಗಾರ
ಸುಳ್ಯ: ಸುಳ್ಯದ ವಿದ್ಯುತ್ ಅವ್ಯವಸ್ಥೆ ಮತ್ತು 110 ಕೆವಿ ಸಬ್‌ಸ್ಟೇಶನ್ ಅನುಷ್ಠಾನಗೊಳ್ಳದಿರುವುದಕ್ಕೆ ರಾಜ್ಯ ಸರಕಾರವೇ ಕಾರಣ ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆಯನ್ನು ಮುಂದಿಟ್ಟು ಕಾಂಗ್ರೆಸ್ ರಾಜಕಾರಣ ಮಾಡಲು ಹೊರಟಿದೆ. ಸರಕಾರ ಮೆಸ್ಕಾಂಗೆ ಸೂಕ್ತ ಸಲಕರಣೆಗಳನ್ನು ಸರಬರಾಜು ಮಾಡುತ್ತಿಲ್ಲ. 2-3 ತಿಂಗಳ ಹಿಂದೆ ಹಾಕಬೇಕಿದ್ದ ಬ್ರೇಕರ್‌ಗಳನ್ನು ಇತ್ತೀಚೆಗಷ್ಟೇ ಅಳವಡಿಸಿದ್ದಾರೆ. 110 ಕೆವಿ ಸಮಸ್ಯೆಯ ಬಗ್ಗೆ ನಾನು ಸರಕಾರದ ಗಮನ ಸೆಳೆದಿದ್ದೇನೆ. ಅರಣ್ಯ ಇಲಾಖೆಯ ಒಪ್ಪಿಗೆ ಸಿಗಲಷ್ಟೇ ಬಾಕಿ. ಇದನ್ನು ಮಾಡಿಸಬೇಕಾದವರು ಅರಣ್ಯ ಸಚಿವರು. ಒಬ್ಬ ಶಾಸಕನಾಗಿ ಈ ಕುರಿತಂತೆ ನಾನು ಏನೇನೆಲ್ಲ ಮಾಡಬೇಕೋ ಅದೆಲ್ಲವನ್ನು ಮಾಡಿದ್ದೇನೆ. ಆದರೆ ಕಾಂಗ್ರೆಸ್ಸಿಗರು ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದ ಅಂಗಾರ 1962ರಲ್ಲಿ ಸುಳ್ಯದಲ್ಲಿ 33ಕೆವಿ ಸಬ್‌ಸ್ಟೇಶನ್ ಅನುಷ್ಠಾನಗೊಂಡಿತ್ತು. ಆ ಬಳಿಕ ಆದ ಬೆಳ್ಳಾರೆ, ನೆಲ್ಯಾಡಿ, ಸುಬ್ರಹ್ಮಣ್ಯ, ಸವಣೂರು ಸಬ್‌ಸ್ಟೇಶನ್‌ಗಳು ನಾನು ಶಾಸಕನಾದ ಬಳಿಕವೇ ಆಗಿವೆ ಎಂದರು. ಕುಮ್ಕಿ ಹೋರಾಟದ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಲು ಹೊರಟಿದೆ.
ಬಿಜೆಪಿ ಸರಕಾರ ಇರುವಾಗ ಈ ಕುರಿತಂತೆ ಕರಡು ತಯಾರಿಸಿ ರಾಜ್ಯಪಾಲರಿಗೆ ಸಲ್ಲಿಸಿದ್ದರೂ ಅವರು ಅಂಗೀಕಾರ ಮಾಡಿರಲಿಲ್ಲ. ಈಗ ಸಚಿವರು ಕುಮ್ಕಿ ಹಕ್ಕು ನೀಡುತ್ತೇವೆ ಎಂದು ಹೇಳುತ್ತಿರುವುದು ಸರಿಯಲ್ಲ. ಹಾಗಾದರೆ ಎರಡೂವರೆ ವರ್ಷದಿಂದ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ ಅವರು, ರಾಜೀನಾಮೆ ನೀಡಲು ನನ್ನನ್ನು ಕಾಂಗ್ರೆಸ್ಸಿಗರು ಗೆಲ್ಲಿಸಿದ್ದಲ್ಲ. ಜನರು ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು.
ಜಿ.ಪಂ. ಸದಸ್ಯ ನವೀನ್‌ಕುಮಾರ್ ಮೇನಾಲ, ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಚಂದ್ರಾ ಕೋಲ್ಚಾರ್, ಶೈಲೇಶ್ ಅಂಬೆಕಲ್ಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







