ಮಂಗಳೂರು: ಸಿಎಫ್‌ಐ ದಿಂದ ‘ ಗೋಡ್ಸೆಯಿಂದ ಗೋಧ್ರಾದವರೆಗೆ ’ರಾಷ್ಟ್ರೀಯ ಅಭಿಯಾನಕ್ಕೆ ಇಂದು ವಿದ್ಯಾರ್ಥಿ ಜಾಥಕ್ಕೆ ಚಾಲನೆ

ಮಂಗಳೂರು,ಜ.30: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ)ದಿಂದ ‘ ಗೋಡ್ಸೆಯಿಂದ ಗೋಧ್ರಾದವರೆಗೆ ’ ರಾಷ್ಟ್ರೀಯ ಅಭಿಯಾನಕ್ಕೆ ಇಂದು ನಗರದ ಜ್ಯೋತಿವೃತ್ತದಲ್ಲಿ ವಿದ್ಯಾರ್ಥಿ ಜಾಥಕ್ಕೆ ಚಾಲನೆ ನೀಡುವ ಮೂಲಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ವಿ ಸುಹೈಬ್ ಉದ್ಘಾಟಿಸಿದರು.
ರಾಷ್ಟ್ರೀಯ ಅಭಿಯಾನದ ಅಂಗವಾಗಿ ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರವು ದೇಶದಲ್ಲಿ ಶಿಕ್ಷಣದ ಪಠ್ಯವನ್ನು ಬದಲಾಯಿಸುವ ಕಾರ್ಯಕ್ಕೆ ಮುಂದಾಗಿದ್ದು ಇತಿಹಾಸವನ್ನು ತಿರುಚುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದ್ದು ಮಾತನಾಡುವ ಹಕ್ಕನ್ನು, ತಿನ್ನುವ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗುತ್ತ್ತಿದೆ. ಆರ್‌ಎಸ್‌ಎಸ್ ಫ್ಯಾಶಿಷಂನ್ನು ಪ್ರೋತ್ಸಾಹಿಸುತ್ತಿದ್ದು ಅದು ದೇಶದ ಮೊದಲ ಶತ್ರು . ಫ್ಯಾಶಿಷಂ ನ ಈ ನೀತಿಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಒಪ್ಪದ ಮನುಸ್ಮತಿವಾದಿಗಳು ಅಂಬೇಡ್ಕರ್ ಅವರನ್ನು ತಮಗೆ ಮಾದರಿ ಎಂದು ಹೇಳಿಕೊಂಡು ದಲಿತರನ್ನು ತಮ್ಮತ್ತ ಆಕರ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿ ಹಿಂದೂರಾಷ್ಟ್ರದ ಬಗ್ಗೆ ಮಾತನಾಡುವವರು ದೇಶದ ಮೊದಲ ಶತ್ರುವಾಗಿದ್ದಾರೆ. ಅದನ್ನು ಪ್ರತಿಪಾದಿಸುವ ಸಂಘಪರಿವಾರ ಯಾವತ್ತೂ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಅಂಡಮಾನ್ ಜೈಲಿನಲ್ಲಿ ನಾನೇನು ತಪ್ಪ ಮಾಡಿಲ್ಲ ಎಂದು ಬ್ರಿಟಿಷರಿಗೆ ಪತ್ರ ಬರೆದ ಹೇಡಿಯನ್ನು ವೀರ ಎಂದು ಕರೆಯುತ್ತಾರೆ ಎಂದು ಟೀಕಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾದ ರಾಜ್ಯ ಪ್ರ.ಕಾರ್ಯದರ್ಶಿ ಮುಹಮ್ಮದ್ ತುಫೈಲ್ ವಹಿಸಿದ್ದರು. ಚಿಂತಕ ಆರೋಹಳ್ಳಿ ರವೀಂದ್ರ, ಬಿವಿಎಸ್ ಮುಖಂಡ ರಘುಧರ್ಮಸೇನಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ತಪ್ಸೀರ್, ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಾಕೀರ್, ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಇರ್ಷಾದ್, ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಇರ್ಷಾದ್, ಉಡುಪಿ ಜಿಲ್ಲಾಧ್ಯಕ್ಷ ಶಫೀಕ್ ಉಪಸ್ಥಿತರಿದ್ದರು.













