ಬೆಂಗಳೂರು : ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ-ಧರ್ಮಾಧಾರಿತ ವಿಭಜನೆ ಅನಗತ್ಯ: ಮುಖ್ತಾರ್ ಅಬ್ಬಾಸ್‌ನಖ್ವಿ

ಬೆಂಗಳೂರು, ಜ.30: ಶೈಕ್ಷಣಿಕ ಸಂಸ್ಥೆಗಳ ಆವರಣಗಳು ದೇಶದ ಅಭಿವೃದ್ಧಿ, ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗಬೇಕೆ ಹೊರತು, ರಾಜಕೀಯ ಕಾರಣಗಳಿಗಾಗಿ ಜಾತಿ, ಧರ್ಮದ ಆಧಾರದಲ್ಲಿ ವಿಭಜನೆಯಾಗಬಾರದು ಎಂದು ಕೇಂದ್ರ ಸಂಸದೀಯ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಶನಿವಾರ ಆನೇಕಲ್ ತಾಲೂಕಿನ ಗುಳಿಮಂಗಲ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳಿರುವಂತೆ ನಮ್ಮ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಶಿಕ್ಷಣ ಸಂಸ್ಥೆಗಳು ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವಕರನ್ನು ಸನ್ನದ್ಧಗೊಳಿಸಬೇಕು ಎಂದರು.
ಭಯೋತ್ಪಾದನೆ ಮೂಲಕ ದೇಶದಲ್ಲಿನ ಶಾಂತಿ, ಏಕತೆ, ಸಹೋದರತೆಗೆ ಧಕ್ಕೆಯುಂಟು ಮಾಡುವ ಕೆಲಸವನ್ನು ಮಾಡುತ್ತಿರುವ ಹೇಡಿಗಳು, ದುಷ್ಟಶಕ್ತಿಗಳ ವಿರುದ್ಧ ನಾವು ಸಂಘಟಿತ ಹೋರಾಟ ಮಾಡಬೇಕು. ನಮ್ಮ ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಮುರಿಯುವ ಅವರ ಪ್ರಯತ್ನ ಎಂದಿಗೂ ಫಲಿಸುವುದಿಲ್ಲ ಎಂದು ಮುಖ್ತಾರ್ ಅಬ್ಬಸ್ ನಖ್ವಿ ಹೇಳಿದರು.
ರಾಷ್ಟ್ರವಿರೋಧಿಗಳ ವಿರುದ್ಧ ಜಿಹಾದ್ : ಬಹುಸಂಖ್ಯಾತರು, ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬರೂ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಕೆಲವರು ಧರ್ಮವನ್ನು ರಕ್ಷಾ ಕವಚವನ್ನಾಗಿ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಅಡ್ಡಿಯುಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಚಳವಳಿ ಅಥವಾ ಜಿಹಾದ್ (ಧರ್ಮಯುದ್ಧ) ಮಾಡಬೇಕು ಎಂದು ಅವರು ಕರೆ ನೀಡಿದರು.
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿರುವ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಯಾವುದೇ ಧಕ್ಕೆಯಿಲ್ಲ. ದೇಶದಲ್ಲಿ ಅಲ್ಪಸಂಖ್ಯಾತರ 22 ಸಾವಿರ ಶಿಕ್ಷಣ ಸಂಸ್ಥೆಗಳು ನೋಂದಣಿಯಾಗಿವೆ. ಇದಕ್ಕಿಂತ ಏಳು ಪಟ್ಟು ಹೆಚ್ಚು ಸಂಸ್ಥೆಗಳು ಇನ್ನು ನೋಂದಣಿಯಾಗಿಲ್ಲ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು. ಎಲ್ಲ ಶಿಕ್ಷಣ ಸಂಸ್ಥೆಗಳು ನೋಂದಣಿಯಾಗಿ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿ, ಮಕ್ಕಳಿಗೆ ಶಿಕ್ಷಣ ಒದಗಿಸಬೇಕು ಎಂಬುದು ನಮ್ಮ ಆಶಯ. ಆದುದರಿಂದ, ಶಿಕ್ಷಣ ಸಂಸ್ಥೆಗಳ ನೋಂದಣಿಯ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾಲಯ ಹಾಗೂ ಜಾಮಿಯಾ ಮಿಲ್ಲಿಯಾ ಕೇಂದ್ರೀಯ ವಿವಿಗಳಾಗಿವೆ. ಇವುಗಳು ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಯ ಸ್ಥಾನಮಾನ ಹೇಗೆ ಪಡೆಯಲು ಸಾಧ್ಯ ಎಂಬುದರ ಕುರಿತು ಗೊಂದಲ ಉಂಟಾಗಿದೆ. ಈ ಪ್ರಕರಣದ ಕುರಿತು ನ್ಯಾಯಾಲಯ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







