ಮಂಗಳೂರು : ರೈತರ ಜೀವನ ಸುಧಾರಣೆಗಾಗಿ ಆಂದೋಲನ: ಯೋಗೇಂದ್ರ ಯಾದವ್

ಮಂಗಳೂರು, ಜ. 30: ದೇಶದಲ್ಲಿ ಸರಕಾರಿ ನೌಕರರಿಗೆ ವೇತನ ಆಯೋಗವಿದ್ದರೂ, ದೇಶಕ್ಕೆ ಅನ್ನ ನೀಡುವ ರೈತರ ಜೀವನ ಮಟ್ಟ ಸುಧಾರಣೆಗೆ ಯಾವುದೇ ಆಯೋಗವಿಲ್ಲ. ಈ ಬಗ್ಗೆ ಸ್ವರಾಜ್ಯ ಅಭಿಯಾನ ವತಿಯಿಂದ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿ ದೇಶವ್ಯಾಪಿ ಆಂದೋಲನ ನಡೆಸಲಾಗುವುದು ಎಂದು ಜೈಕಿಸಾನ್ ಆಂದೋಲನದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಹೇಳಿದ್ದಾರೆ. ನಗರದ ಪುರಭವನದಲ್ಲಿ ಆಯೋಜಿಸಲಾದ ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬರಪೀಡೀತ ರೈತರಿಗಾಗಿ ಸಂವೇದನಾ ಯಾತ್ರೆಯನ್ನು ಕಳೆದ ಅಕ್ಟೋಬರ್‌ನಲ್ಲಿ ಕೈಗೊಳ್ಳಲಾಗಿತ್ತು.
ರಾಜ್ಯದಲ್ಲಿ ಬರಪೀಡಿತ ಯಾದಗಿರಿ ಜಿಲ್ಲೆಯಿಂದ ಆರಂಭಿಸಲಾಗಿತು. ಈ ಯಾತ್ರೆ ದೇಶದ 12 ರಾಜ್ಯಗಳಲ್ಲಿ ಹಾದುಹೋಗಿದೆ. ಡಿಸೆಂಬರ್‌ನಲ್ಲಿ ನಮ್ಮ ಸಂಘಟನೆಯಿಂದ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯನ್ನು ಬರಪೀಡಿತ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಿಸಬೇಕು. ಬರಪೀಡಿತ ಪ್ರದೇಶಗಳಿಗೆ ಹೆಚ್ಚುವರಿ ಆಹಾರಧಾನ್ಯ ಪೂರೈಸಬೇಕು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕು. ತಮಿಳ್ನಾಡು ರಾಜ್ಯದ ಮಾದರಿಯಲ್ಲಿ ಬರಪೀಡಿತ ಸಂತ್ರಸ್ತರಿಗೆ ತಲಾ 2 ಕಿಲೋ ಆಹಾರಧಾನ್ಯ, ಅಡುಗೆ ಎಣ್ಣೆಯನ್ನು ಸರ್ಕಾರ ಉಚಿತವಾಗಿ ಪಡಿತರದ ಜತೆ ವಿತರಿಸಬೇಕು ಎಂದು ಅಫಿದಾವಿತ್‌ನಲ್ಲಿ ಆಗ್ರಹಿಸಲಾಗಿದೆ. ಈ ಬಗ್ಗೆ ನ್ಯಾಯಾಲದಲ್ಲಿ ವಿಚರಣೆ ನಡೆಯುತ್ತಿದ್ದು, ಫೆ. 1ರಂದು ನಿರ್ಧಾರ ಪ್ರಕಟವಾಗಲಿದೆ. ರೈತರಿಗೆ ಪೂರಕವಾಗಿ ಯಾವುದೇ ಸರ್ಕಾರಗಳು ಕೇಂದ್ರ ಅಥವಾ ರಾಜ್ಯಗಳಲ್ಲಿ ಸ್ಪಂದಿಸುತ್ತಿಲ್ಲ ಎಂದವರು ಬೇಸರಿಸಿದರು. ಆಮ್ ಆದ್ಮಿ ಪಕ್ಷ(ಆಪ್)ಭ್ರಷ್ಟಾಚಾರ ವಿಷಯವೊಂದನ್ನೇ ಇಟ್ಟುಕೊಂಡು ಮುಂದೆ ಬಂದ ಪಕ್ಷ. ಆಪ್ ಸಾಮಾನ್ಯ ಜನರಲ್ಲಿ ಹೊಸ ಆಶಾಕಿರಣವನ್ನು ಹುಟ್ಟುಹಾಕಿತುತಿ. ಹಾಗೆಯೇ ಪರ್ಯಾಯ ರಾಜಕಾರಣದ ಹೊಸ ಆಯಾಮವನ್ನು ನೀಡಿತುತಿ. ಆದರೆ, ಪಕ್ಷ ಇಂದಿನ ದಿನಗಳಲ್ಲಿ ಎಲ್ಲ ಪಕ್ಷಗಳಂತೆಯೇ ಆಗಿದೆ ಎಂದು ಹೇಳಿದರು.
ದೇಶದಲ್ಲಿ ಸಾಕಷ್ಟು ಆಹಾರ ದಾಸ್ತಾನು ಇದ್ದರೂ ಬರಪೀಡಿತ ಜಿಲ್ಲೆಗಳ ಶೇ.39 ಕುಟುಂಬಗಳಿಗೆ ಆಹಾರಧಾನ್ಯ ಸಿಕ್ಕಿಲ್ಲ. ಕೇಂದ್ರ ಸರ್ಕಾರ 37 ಸಾವಿರ ಕೋಟಿ ನೆರವಿನ ಮೊತ್ತಘೋಷಿಸಿದರೂ ಸಂತ್ರಸ್ತರಿಗೆ ತಲುಪಿಲ್ಲ. ರಾಜ್ಯ ಸರ್ಕಾರಗಳಿಗೆ ತಮ್ಮದೇ ನಿಧಿಯಿಂದ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸಾಧ್ಯವಿದ್ದರೂ ಕೇಂದ್ರದತ್ತ ಬೆರಳು ತೋರಿಸುತ್ತಿದ್ದಾರೆ. ಎರ ಡು ಸರ್ಕಾರಗಳಿಗೂ ರೈತರ ಪರ ಕಾಳಜಿ ಇಲ್ಲ ಎಂದು ದೂರಿದರು.
ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ಎಂದ ಯಾದವ್, ನಾನು ಈಗ ಆಪ್ ಪಕ್ಷದಲ್ಲಿ ಇಲ್ಲ. ಅಲ್ಲಿ ಕೇವಲ ಭ್ರಷ್ಟಾಚಾರ ವಿಚಾರವನ್ನು ಮಾತ್ರ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಈ ಸಂಘಟನೆಯಲ್ಲಿ ರೈತರ ಪರವಾದ ಹೋರಾಟ, ಮುಂದೆ ಶಿಕ್ಷಾ ಸ್ವರಾಜ್ ಅಭಿಯಾನ, ಬಳಿಕ ಭ್ರಷ್ಟಾಚಾರದ ಕುರಿತು ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಕಬ್ಬು ಪಾವತಿ ಬಾಕಿ ರಾಷ್ಟ್ರೀಯ ಸಮಸ್ಯೆ
ದೇಶದಲ್ಲಿ ಕಬ್ಬಿನ ಕಾರ್ಖಾನೆಗಳು 37 ಸಾವಿರ ಕೋಟಿ ರೂ. ಕಬ್ಬಿನ ಬಾಕಿ ಹಣವನ್ನು ರೈತರಿಗೆ ಪಾವತಿ ಮಾಡಬೇಕಿದೆ. ಇದು ಕೇವಲ ಕರ್ನಾಟಕದ ಸಮಸ್ಯೆ ಮಾತ್ರವಲ್ಲ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲೂ ಗಂಭೀರವಾದ ಸಮಸ್ಯೆಯಾಗಿದೆ. ಆದ್ದರಿಂದ ರಾಜ್ಯ ಸೇರಿದಂತೆ ಇಡೀ ದೇಶದ ರೈತರನ್ನು ಒಟ್ಟು ಸೇರಿಸಿ ಕಬ್ಬು ಬಾಕಿ ಪಾವತಿಗೆ ನೀತಿ ನಿರೂಪಿಸಲು ಒತ್ತಾಯಿಸಲಾಗುವುದು ಎಂದರು.
ಫೆ. 27-28ರಂದು ‘ಆ್ಯಕ್ಟ್ ನೌ’ ಸಮಾವೇಶ
ಸ್ವರಾಜ್ ಅಭಿಯಾನ ನೇತೃತ್ವದಲ್ಲಿ ಫೆ.27-28ರಂದು ನವದೆಹಲಿಯಲ್ಲಿ ಭ್ರಷ್ಟಾಚಾರವನ್ನು ವಿರೋಧಿಸಿ ಆ್ಯಕ್ಟ್ ನೌ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಭ್ರಷ್ಟಾಚಾರ ವಿರೋಧಿಗಳು ಭಾಗವಹಿಸಲಿದ್ದಾರೆ ಎಂದು ಯೋಗೇಂದ್ರ ಯಾದವ್ ಹೇಳಿದರು.
ಅಣ್ಣಾ ಹಜಾರೆ, ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಎಸ್.ಆರ್. ಹಿರೇಮಠ ಸೇರಿದಂತೆ ಇನ್ನಿತರ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಎಂಆರ್‌ಪಿಎಲ್‌ಗಾಗಿ ಭೂಸ್ವಾಧೀನದ ವಿರುದ್ಧದ ಹೋರಾಟಕ್ಕೆ ಬೆಂಬಲ
ಮಂಗಳೂರಿನಲ್ಲಿ ಎಂಆರ್‌ಪಿಎಲ್‌ಗಾಗಿ ಮತ್ತೆ ಸ್ಥಳೀಯ ರೈತರ ವಿರೋಧದ ಹೊರತಾಗಿಯೂ ಭೂಸ್ವಾಧೀನಕ್ಕೆ ಮುಂದಾಗುವ ಮೂಲಕ ಜನವಿರೋಧಿ ನೀತಿಗೆ ಸರಕಾರ ಯತ್ನಿಸುತ್ತಿದೆ. ರೈತರ ಪರ ಹೋರಾಟಕ್ಕೆ ಸ್ವರಾಜ್ ಅಭಿಯಾನ್ ಬೆಂಬಲ ನೀಡಲಿದೆ ಎಂು ಯೋಗೇಂದ್ರ ಯಾದವ್ ಹೇಳಿದರು.







