ಪಡುಬಿದ್ರೆ : ಸಚಿವರಿಗೆ ಸೆಡ್ಡು ಹೊಡೆದ ಕರಾವಳಿಯ ಕುವರಿ!

ಪಡುಬಿದ್ರೆ, ಜ.30: ಡಿವೈಎಸ್ಪಿ ಅನುಪಮಾ ಶೆಣೈ ಎಂದಾಗ ಇದೀಗ ಎಲ್ಲರಿಗೂ ಚಿರಪರಿಚಿತ. ಈಕೆ ಇತ್ತೀಚೆಗಷ್ಟೆ ಕೂಡ್ಲಿಗಿ ಶಾಸಕ, ಕಾರ್ಮಿಕ ಮಂತ್ರಿಯಾಗಿರುವ ಪರಮೇಶ್ವರ ನಾಯ್ಕಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮೂಲಕ ರಾಜ್ಯದಲ್ಲಿ ಸುದ್ದಿಮಾಡಿದ ಈಕೆ ಮೂಲತಃ ಉಡುಪಿ ಜಿಲ್ಲೆ ಪಡುಬಿದ್ರೆ ಸಮೀಪದ ಉಚ್ಚಿಲದ ಪಣಿಯೂರಿನವರು. ಮಗಳು ಡಿವೈಎಸ್‌ಪಿ ಆಗಿದ್ದರೂ ತಂದೆ ಮಾತ್ರ ಎಂದಿನಂತೆ ಸಣ್ಣದೊಂದು ಕ್ಯಾಂಟೀನ್ ನಡೆಸುತ್ತಾ ಜೀವನ ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಬಡಾ ಗ್ರಾಮದ ಉಚ್ಚಿಲ ಜನಪ್ರಿಯ ಮಿಲ್ ಸಮೀಪ ನಿವಾಸಿ ನಳಿನಿ ಮತ್ತು ರಾಧಾಕೃಷ್ಣ ಶೆಣೈ ದಂಪತಿಗೆ ಮೂವರು ಮಕ್ಕಳು. ಹಿರಿಯ ಮಗಳೇ ಅನುಪಮಾ ಶೆಣೈ. ಇನ್ನಿಬ್ಬರು ಸಹೋದರರು. ಒಬ್ಬ ಅಚ್ಯುತ್ ಶೆಣೈ ಇನ್ನೋರ್ವ ಅರವಿಂದ ಶೆಣೈ. ಉಚ್ಚಿಲ ಪೇಟೆಯಲ್ಲಿ 40 ವರ್ಷಗಳಿಂದಲೂ ಸಣ್ಣದೊಂದು ಚಹಾ ಕ್ಯಾಂಟೀನ್ ನಡೆಸಿ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ರಾಧಾಕೃಷ್ಣ ಶೆಣೈ ನೀಡಿದ್ದಾರೆ. ಅನುಪಮಾ ಶೆಣೈಯವರು ಪ್ರಾಥಮಿಕ ಶಿಕ್ಷಣವನ್ನು ಕುಲಶೇಖರದ ಸೈಂಟ್ ಜೋಸೆಫ್‌ನಲ್ಲಿ ಮುಗಿಸಿ, ಮಂಗಳೂರಿನ ಸೈಂಟ್ ಅಲೋಶಿಯಸ್‌ನಲ್ಲಿ ಎಮ್‌ಎಸ್‌ಡಬ್ಲ್ಯೂ ಮಾಡಿದವರು. ಅಲೋಶಿಯಸ್ ಕಾಲೇಜಿನ ಈಗಿನ ಪ್ರಾಂಶುಪಾಲರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ.
ಸಣ್ಣಂದಿನಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರು. ತನ್ನ ಕನಸನ್ನು ನನಸು ಮಾಡಬೇಕು ಎಂಬ ಹಂಬಲದಿಂದ ಸ್ನಾತಕೋತ್ತರ ಪದವಿಯ ಬಳಿಕ ದೆಹಲಿಗೆ ತೆರಳಿ ಐಪಿಎಸ್‌ಗಾಗಿ ತರಬೇತಿ ಪಡೆದರು. ಐಪಿಎಸ್ ಹಾಗೂ ಕೆಎಎಸ್ ಪರೀಕ್ಷೆಗಳನ್ನು ಬರೆದರೂ ಐಪಿಎಸ್‌ನಲ್ಲಿ ಸಫಲರಾಗದೇ ಕರ್ನಾಟಕ ಪೊಲೀಸ್ ಸರ್ವೀಸ್‌ಗೆ ಡಿವೈಎಸ್ಪಿಯಾಗಿ ನೇರ ನೇಮಕಾತಿಯನ್ನು ಪಡೆದಿದ್ದರು. ಪ್ರೊಬೆಶನರಿ ಹಂತವನ್ನು ಮಡಿಕೇರಿಯಲ್ಲಿ ಮುಗಿಸಿದ ಇವರು ಡಿವೈಎಸ್ಪಿಯಾಗಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದರು. ಇದೀಗ ಅವರ ಸೇವೆಯನ್ನು ಕಂಡ ಜನರು ದಕ್ಷತೆ ಮತ್ತು ಪ್ರಾಮಾಣಿಕತೆ ಹಾಗೂ ಧೈರ್ಯಶಾಲಿತನವಿರುವ ಅತ್ಯುತ್ತಮ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಆಕೆ ಉತ್ತಮ ಸ್ವಭಾವದವಳು. ಯಾವುದೇ ಲಂಚ, ಭ್ರಷ್ಟಾಚಾರಗಳಿಗೆ ತಲೆಬಾಗುವವಳಲ್ಲ. ಅನ್ಯಾಯವಾದರೆ ನ್ಯಾಯದ ಪರ ಹೋರಾಡುವವಳು. ಆದರೆ ಮೊನ್ನೆ ತಾನೇ ಸಚಿವರ ದುರ್ವರ್ತನೆ ಬೇಸರ ತಂದಿದೆ. ಈ ರೀತಿ ಓರ್ವ ದಕ್ಷ ಅಧಿಕಾರಿಯೊಂದಿಗೆ ಸಚಿವರ ಈ ವರ್ತನೆ ಸರಿಯಲ್ಲ. ಅಬ್ದುಲ್ಲಾ, ಸ್ಥಳೀಯ ವ್ಯಕ್ತಿ







