ಮಂಗಳೂರು : ಜಾತ್ಯತೀತ ನೆಲೆಗಟ್ಟಿನಿಂದ ಸಮಗ್ರ ಭಾರತ ಉಳಿದಿದೆ-ಪ್ರೊ.ಯೋಗೇಂದ್ರ ಯಾದವ್

ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶ ಸಮಾರೋಪ
ಮಂಗಳೂರು.(ಬಪ್ಪ ಬ್ಯಾರಿ ವೇದಿಕೆ )ಜ.30:ಜಾತ್ಯತೀತ ನೆಲೆಗಟ್ಟಿನಿಂದ ಸಮಗ್ರ ಭಾರತ ಉಳಿದಿದೆ.ದೇಶದ ಐತಿಹಾಸಿಕ ಕಾಲಘಟ್ಟದಿಂದ ಬಂದಿರುವ ವೈವಿಧ್ಯತೆ,ಬಹು ಮುಖಿ ಸಂಸ್ಕೃತಿ ಈ ದೇಶದ ಜೀವಾಳವಾಗಿದೆ ಎಂದು ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದರು.
ಅವರು ಕರ್ನಾಟಕ ಕೋಮು ಸೌರ್ಹಾದ ವೆದಿಕೆಯ ಕೇಂದ್ರ ಸಮಿತಿಯ ವತಿಯಿಂದ ನಗರದ ಪುರಭವನದಲ್ಲಿ ಇಂದು ಹಮ್ಮಿಕೊಂಡ ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶದ ಸಮಾರೋಪ ಭಾಷಣ ಮಾಡಿದರು. ದೇಶದಲ್ಲಿ ಜಾತ್ಯತೀತ ಶಕ್ತಿಗಳು ಜಾತ್ಯತೀತ ರಾಜಕಾರಣವನ್ನು ಜನ ಸಾಮನ್ಯರಿಗೆ ಮನವರಿಕೆ ಮಾಡುವಲ್ಲಿ ಸೋತಿರುವುದು ಕೋಮುವಾದಿ ಶಕ್ತಿಗಳು ಮೇಲೆ ಬರಲು ಪ್ರಮುಖ ಕಾರಣವಾಗಿದೆ.
ದೇಶದಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರ ಹಿಡಿಯಲು ಈ ರೀತಿಯ ವೈಫಲ್ಯ ಒಂದು ಪ್ರಮುಖ ಕಾರಣ.ಬಿಜೆಪಿ ವಿರೋಧಿ ಶಕ್ತಿಗಳನ್ನು ಮಾತ್ರ ಒಂದು ಗೂಡಿಸಿದಾಗ ಕೋಮುವಾದಿಗಳನ್ನು ಮಣಿಸಲು ಸಾಧ್ಯವಿದೆ ಎನ್ನುವುದು ತಪ್ಪು ಲೆಕ್ಕಾಚಾರ.ಜನಸಾಮಾನ್ಯರ ಸಂಸ್ಕೃತಿಯನ್ನು ಅರ್ಥಮಾಡಕೊಂಡು ಅವರ ಭಾಷೆಯಲ್ಲಿ ಕೋಮುವಾದಿಗಳ ತಂತ್ರಗಳನ್ನು ಬಯಲುಗೊಳಿಸಬೇಕಾಗಿದೆ.ಸಣ್ಣ ಸಣ್ಣ ಕೋಮುಗಲಭೆಗಳ ಘಟನೆಗಳ ಬಗ್ಗೆಯೂ ತಳಮಟ್ಟದ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದೆ. ಅವರ ನಡುವಿನಲ್ಲಿ ಬೆಳೆದು ಬಂದಿರುವ ಜಾತ್ಯತೀತ ಸಂಸ್ಕೃತಿಯ ಮೂಲಕ ಅವರನ್ನು ಒಂದು ಗೂಡಿಸಿ ಕೋಮುವಾದಿಗಳು ಸಮಾಜವನ್ನು ಒಡೆಯದಂತೆ ಎಚ್ಚರವಹಿಸಬೇಕಾಗಿದೆ ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಜನರ ತಂಡಗಳು ರಚಿಸಬೇಕಾಗಿದೆ.ಅವರ ಮೂಲಕ ಈ ದೇಶದ ಸಂವಿಧಾನಿಕ ವೌಲ್ಯಗಳನ್ನು ಜನಸಾಮನ್ಯರಿಗೆ ಮನವರಿಕೆ ಮಾಡಿಕೊಡ ಬೇಕಾಗಿದೆ ಎಂದು ಯೋಗೇಂದ್ರ ಯಾದವ್ ತಿಳಿಸಿದರು.
ಈ ದೇಶದಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರ ಹಿಡಿದ ಬಳಿಕ ಸಣ್ಣ ಘಟನೆಗಳ ಮೂಲಕ ಕೋಮುವಾದಗಳನ್ನು ಜೀವಂತ ವಾಗಿರಿಸುತ್ತಾರೆ.ಅಲ್ಪ ಸಂಖ್ಯಾತರನ್ನು ದಲಿತರನ್ನು ದೇಶದ ಎರಡನೆ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವ ತಂತ್ರಗಾರಿಕೆಯನ್ನು ನಡೆಸುತ್ತಿರುವುದು ಸವಾಲುಗಳು ನಮ್ಮ ಮುಂದಿದೆ.ಈ ನಿಟ್ಟಿನಲ್ಲಿ ಕೋಮುವಾದಿಗಳನ್ನು ಎದುರಿಸಲು ಹೊಸ ತಂತ್ರಗಾರಿಕೆಗಳನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಯೋಗೇಂದ್ರ ಯಾದವ್ ತಿಳಿಸಿದರು.
ಧರ್ಮ ಆಧಾರಿತ ರಾಷ್ಟ್ರೀಯತೆಯ ವಿರುದ್ಧ ಜನರನ್ನು ಜಾಗೃತಗೊಳಿಸಬೇಕಾಗಿದೆ:-
ಧರ್ಮ ಆಧಾರಿತ ರಾಷ್ಟ್ರೀಯತೆಯ ವಿರುದ್ಧ ಜನರನ್ನು ಜಾಗೃತಗೊಳಿಸಬೇಕಾಗಿದೆ ಎಂದು ತೀಸ್ತಾ ಸೆಟಲ್ವಾದ್ ತಿಳಿದರು.ಗೋಲ್ವಾಲ್ಕರ್ ಅವರು ತಮ್ಮ ಪುಸ್ತಕದ ಮೂಲಕ ಹಿಂದು ರಾಷ್ಟ್ರೀಯತೆಯನ್ನು ಬಲವಾಗಿ ಪ್ರತಿಪಾದಿಸುತ್ತಾರೆ.ಆರ್‌ಎಸ್‌ಎಸ್ ಈ ಸಿದ್ದಾಂತದ ಆಧಾರದಲ್ಲಿ ಜನರನ್ನು ಸಂಘಟಿಸುತ್ತಾ ದೇಶದಲ್ಲಿ ಕೋಮುವಾದಿ ಶಕ್ತಿಗಳನ್ನು ಬೆಳೆಸುತ್ತಾ ಬಂದಿದೆ.ಆ ಕಾರಣದಿಂದ ಧರ್ಮ ಆಧಾರಿತ ರಾಷ್ಟ್ರೀಯತೆಯನ್ನು ತಿರಸ್ಕರಿಸಬೇಕು.ಕೋಮುದ್ವೇಷವನ್ನು ಬಿತ್ತುವ ಭಾಷಣಕಾರರನ್ನು ತಡೆಯಲು ಸ್ಥಳೀಯವಾಗಿ ಜನರನ್ನು ಸಂಘಟಿತರನ್ನಾಗಿ ಮಾಡಬೇಕು ಎಂದು ತೀಸ್ತಾ ಸೆಟಲ್ವಾದ್ ತಿಳಿಸಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿಕೊಂಡ ಗೌರಿ ಲಂಕೇಶ್ ಮಾತನಾಡುತ್ತಾ,ಕೋಮುದ್ವೇಷವನ್ನು ಹರಡುವ ಆರ್‌ಎಸ್‌ಎಸ್‌ನಲ್ಲಿ ಮೇಲ್‌ಸ್ತರದಲ್ಲಿ ಎಲ್ಲಾ ಮೇಲ್ವರ್ಗದ (ಜಾತಿಯ ಆಧಾರದಲ್ಲಿ)ಜನರು ಮಾತ್ರ ಏಕಿದ್ದಾರೆ?.ಕೋಮುವಾದಕ್ಕೆ ವಿರುದ್ಧವಾಗಿ ಜನರಿಂದ ಆಯ್ಕೆಯಾದ ಕರಾವಳಿ ಜನಪ್ರತಿನಿಧಿಗಳು ಕೋಮುವಾದವನ್ನು ತಡೆಯಲು ಏನು ಮಾಡುತ್ತಿದ್ದಾರೆ?.ಕೋಮುಗಲಭೆಯಲ್ಲಿ ಬಲಿಯಾಗುವವರು ಮತ್ತು ನಡೆಸುವವರಲ್ಲಿ ಶೂದ್ರ,ದಲಿತರು ಏಕೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ?.ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭಿರ ಆರೋಪ ಹೊತ್ತಿರುವ ಕಲ್ಲಡ್ಕದ ಭಟ್‌ರ ಮೇಲೆ ಏಕೆ ಕ್ರಮ ಜರುಗಿಲ್ಲ ಈ ಪ್ರಶ್ನೆಗಳಿಗೆ ಆಡಳಿತ ನಡೆಸುವವರು ಉತ್ತರಿಸಬೇಕಾಗಿದೆ ಎಂದು ಗೌರಿ ಲಂಕೇಶ್ ಸಭೆಯ ಗಮನಕ್ಕೆ ತಂದರು.ಸಮಾವೇಶದ ಸಂಘಟಕರಾದ ಗುಲಾಬಿ ಬಿಳಿಮಲೆ ಸ್ವಾಗತಿಸಿದರು.ದಿನಕರ ಎಸ್ ಬೆಂಗ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಂಜುಳ ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯಲ್ಲಿ ಕೆ.ಎಲ್.ಅಶೋಕ್,ಜ್ಯೋತಿ ಗುರುಪ್ರಸಾದ್,ಸುರೇಶ್ ಭಟ್ ಬಾಕ್ರಬೈಲು,ಉಮ್ಮರ್ ಯು.ಎಚ್, ಪೀರ್ ಬಾಷಾ ಮೊದಲಾದವರು ಉಪಸ್ಥಿತರಿದ್ದರು.ಗೌಸ್ ಮೊಹಿಯುದ್ದೀನ್ ನಿರ್ಣಯ ಮಂಡಿಸಿದರು.
ಸಹಬಾಳ್ವೆಯ ಸಾಗರ ಸಮಾವೇಶದ ನಿರ್ಣಯಗಳು :-
* ಹೈದರಾಬಾದ್ ಕೇಂದ್ರೀಯ ವಿಶ್ವ ವಿದ್ಯಾನಿಲಯದಲ್ಲಿ ಸಂಶೋಧಕ ರೋಹಿತ್ ವೇಮುಲ ಹಾಗೂ ಮಡಿಕೇರಿಯ ಪ್ರಾಂಶುಪಾಲ ಸುದೇಶ್ ಸಾವು ಜಾತ್ಯತೀತ ವ್ಯವಸ್ಥೆಯಿಂದ ನಡೆದ ಹತ್ಯೆ.ಇದರ ಹಿಂದಿರುವ ಶಕ್ತಿಗಳಿಗೆ ಶಿಕ್ಷೆಯಾಗಬೇಕು.ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು.
* ಸಹಬಾಳ್ವೆಯ ವಿಚಾರಗಳನ್ನು ಜನಸಾಮಾನ್ಯರಲ್ಲಿ ಜಾಗೃತಗೊಳಿಸಲು ಶ್ರಮಿಸಬೇಕು.
* ಕೋಮುದ್ವೇಷದ ಉದ್ರೇಕಕಾರಿ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳಬೇಕು.
* ಕೋಮು ಹಿಂಸೆ ನಿಷೇಧ ಮಸೂದೆ 2011ನ್ನು ಸಂಸತ್ತಿನಲ್ಲಿ ಮರು ಮಂಡಿಸಬೇಕು.
* ಅಭಿವ್ಯಕ್ತಿ ಸ್ವಾತಂತ್ರ ಧಮನಿಸುವ ಶಕ್ತಿಗಳ ವಿರುದ್ಧ ರಾಜಕೀಯ ರಹಿತ ಸಂಘಟಿತ ಹೋರಾಟ ನಡೆಸಲು ಸಂಕಲ್ಪ ಮಾಡುವ ನಿರ್ಣಯ ಕೈ ಗೊಳ್ಳಲಾಯಿತು.







