ಉಡುಪಿ; ಹೆಬ್ಬಾಳದ ‘ಏರ್‌ಪೋರ್ಸ್ ಸ್ಕೂಲ್’ಗೆ ‘ಟೀನೋವೇಟರ್ಸ್’ ಪ್ರಶಸ್ತಿ

ಉಡುಪಿ, ಜ.30: ಮಣಿಪಾಲ ವಿವಿ ಹಾಗೂ ಇಂಕ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರಾಷ್ಟ್ರಮಟ್ಟದ ಯುವ ಸಂಶೋಧಕರನ್ನು ಗುರುತಿಸುವ ಟೀನೋವೇಟರ್ಸ್-2015ರ ಅಗ್ರ ಪ್ರಶಸ್ತಿಯನ್ನು ಬೆಂಗಳೂರು ಹೆಬ್ಬಾಳದ ಏರ್‌ಪೋರ್ಸ್ ಸ್ಕೂಲ್ ತಂಡದ ವಿದ್ಯಾರ್ಥಿಗಳು ಜಯಿಸಿದ್ದಾರೆ. ವಿಜೇತರು ಟ್ರೋಫಿ ಹಾಗೂ 5,00,000 ರೂ. ನಗದನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೇಶದಾದ್ಯಂತ 404 ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ತಂಡಗಳು (9ರಿಂದ 12ನೇ ತರಗತಿ) ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಕೋಲ್ಕತ್ತಾದ ಗಾರ್ಡನ್ ಹೈ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಗಳು ರೂಪಿಸಿದ ಮಾಡೆಲ್ ಎರಡನೆ ಸ್ಥಾನ ಪಡೆಯುವ ಮೂಲಕ 3,00,000ರೂ. ನಗದು ಬಹುಮಾನ ಪಡೆದರು. ಪುಣೆಯ ಭಾರತೀಯ ಜೈನ್ ಸಂಘಟನೆ ಮೂರನೇ ಬೆಸ್ಟ್ ತಂಡವಾಗಿ ಮೂಡಿಬಂದು 1 ಲಕ್ಷ ರೂ.ನಗದು ಬಹುಮಾನ ಪಡೆಯಿತು.
ಅಂತಿಮ ಸುತ್ತಿಗೆ ಆಯ್ಕೆಯಾದ ತಂಡಗಳಲ್ಲಿ ತೀರ್ಪುಗಾರರ ನಿರ್ಧಾರದಂತೆ ಅತ್ಯುತ್ತಮ ಎಂಟು ತಂಡಗಳನ್ನು ಫೈನಲ್‌ಗೆ ಆಯ್ಕೆ ಮಾಡಲಾಗಿತ್ತು. ಇವುಗಳಲ್ಲಿ ಕೊನೆಗೆ ಮೂರು ಅತ್ಯುತ್ತಮ ಮಾಡೆಲ್‌ಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರಕಟಿಸಲಾಯಿತು. ಈ ಎಂಟು ತಂಡಗಳಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಹಿಳೆಯರು ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಸುರಕ್ಷಾ ಕವಚದ ಮಾದರಿಯೂ ಸೇರಿತ್ತು.
ಪ್ರಥಮ ಬಹುಮಾನ ಪಡೆದ ಹೆಬ್ಬಾಳ ತಂಡ, ಅಪಾಯಕಾರಿ ಕೆಲಸ ಮಾಡಲು ಎರಡು ರೋಬೊಟ್‌ಗಳ ಮಾದರಿಯನ್ನು ತಯಾರಿಸಿತ್ತು. ಇವುಗಳು ಮನುಷ್ಯನ ಬದಲು ಈ ಕೆಲಸ ಮಾಡಲಿದ್ದು, ಇವುಗಳಲ್ಲಿ ಒಂದು ರೊಬೋಟ್ ನೀಡುವ ಸೂಚನೆಯಂತೆ ಇನ್ನೊಂದು ರೋಬೊಟ್ ಈ ಕೆಲಸ ಮಾಡುವ ಮಾದರಿ ಇತ್ತು. ಇನ್ನು ಎರಡನೆ ಬಹುಮಾನ ಪಡೆದ ಕೋಲ್ಕತ್ತಾ ತಂಡ, ಓಡುವ ರೈಲುಗಳಲ್ಲಿ ವಿದ್ಯುತ್ ತಯಾರಿಸಿ, ಅದರಿಂದ ರೈಲುಗಳ ಕಂಪಾರ್ಟ್‌ಮೆಂಟ್‌ಗೆ ವಿದ್ಯುತ್ ಸರಬರಾಜು ಮಾಡುವ ಮಾದರಿಯನ್ನು ಪ್ರದರ್ಶಿಸಿತ್ತು. ಪುಣೆ ತಂಡ ವಿದ್ಯುತ್ ಕಾಂತೀಯ ಅಲೆಗಳನ್ನು ಉತ್ಪಾದಿಸಿ ಅದರ ಮೂಲಕ ರೈತನ ಬೆಳೆಯುವ ಬೆಳೆಗಳನ್ನು ನಿಯಂತ್ರಿಸುವ ಮಾದರಿ ಮೂರನೆ ಬಹುಮಾನಕ್ಕೆ ಅರ್ಹವಾಯಿತು.
ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನದ ಚೆಕ್‌ಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಮಣಿಪಾಲ ವಿವಿಯ ಕುಲಪತಿ ಡಾ.ವಿನೋದ್ ಭಟ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಭಾರತದ ಸರಕಾರದ ರಾಷ್ಟ್ರೀಯ ಜ್ಞಾನ ಆಯೋಗದ ನಿವೃತ್ತ ಸಲಹೆಗಾರ ಕಿರಣ್ ದಾತಾರ್, ಸಿನೆಮಾ ನಿರ್ಮಾಪಕ-ಲೇಖಕ ಆನಂದ್ ಗಾಂಧಿ ಹಾಗೂ ಕರ್ನಾಟಕ ಸರಕಾರದ ಐಸಿಟಿ ಸ್ಕಿಲ್ ಡೆವಲಪ್‌ಮೆಂಟ್ ಸೊಸೈಟಿಯ ಸಿಇಒ ಡಾ.ವೌಲಿಶ್ರೀ ಅಗ್ರಹಾರಿ ಉಪಸ್ಥಿತರಿದ್ದರು.







