ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಉಪವಾಸ ಕುಳಿತ ರಾಹುಲ್ ಗಾಂಧಿ

ಹೈದರಾಬಾದ್,ಜ.30: ದಲಿತ ವಿದ್ಯಾರ್ಥಿ ರೋಹಿತ್ ವೇಮುಲರ ಆತ್ಮಹತ್ಯೆ ವಿಷಯದಲ್ಲಿ ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಶನಿವಾರ ಇಲ್ಲಿ ಪ್ರತಿಭಟನಾನಿರತ ಹೈದರಾಬಾದ್ ಕೇಂದ್ರೀಯ ವಿವಿಯ ವಿದ್ಯಾರ್ಥಿಗಳೊಂದಿಗೆ ಉಪವಾಸ ಕುಳಿತು ಬೆಂಬಲ ಸೂಚಿಸಿದರು. ಇದಕ್ಕೂ ಮುನ್ನ ಬೆಳಗಿನ ಜಾವ ಅವರು ಮೋಂಬತ್ತಿ ಬೆಳಕಿನಲ್ಲಿ ಜಾಗರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಧ್ಯರಾತ್ರಿಯ ಬಳಿಕ ಪ್ರತಿಭಟನಾ ಸ್ಥಳವನ್ನು ತಲುಪಿದ ರಾಹುಲ್ ವೇಮುಲ ಅವರ ಜನ್ಮದಿನದ ಪ್ರಯುಕ್ತ ಸುಮಾರು 2,000 ವಿದ್ಯಾಥಿಗಳು ಹಮ್ಮಿಕೊಂಡಿದ್ದ ಜಾಗರಣೆ ಕಾರ್ಯಕ್ರಮದಲ್ಲಿ ಅವರೊಂದಿಗೆ ಸುಮಾರು ಎರಡು ಗಂಟೆಗಳನ್ನು ಕಳೆದರು.
ಬೆಳಿಗ್ಗೆ ಮತ್ತೆ ಪ್ರತಿಭಟನಾ ಸ್ಥಳಕ್ಕೆ ಬಂದ ರಾಹುಲ್ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ತಾನೂ ಅವರೊಂದಿಗೆ ಉಪವಾಸ ಕುಳಿತರು. ಇದು ಎರಡು ವಾರಗಳಲ್ಲಿ ಅವರ ಎರಡನೇ ಭೇಟಿಯಾಗಿದೆ.
ವೇಮುಲರ ತಾಯಿ ರಾಧಿಕಾ ಮತ್ತು ಸೋದರ ರಾಜು ಅವರೂ ಪ್ರತಿಭಟನಾ ಸ್ಥಳದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಕೇಂದ್ರ ಸಚಿವರಾದ ಸ್ಮತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿದಾಗ ಮಧ್ಯ ಪ್ರವೇಶಿಸಿದ ರಾಹುಲ್ ‘‘ಮುರ್ದಾಬಾದ್(ಸಾವನ್ನು ಬಯಸುವುದು)’’ ಎಂದು ಕೂಗದಂತೆ ಅವರಿಗೆ ನಯವಾಗಿ ತಿಳಿಸಿದರು. ಇದೇ ವೇಳೆ ಹೈದರಾಬಾದ್ ವಿವಿ ಕ್ಯಾಂಪಸ್‌ಗೆ ರಾಹುಲ್ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ತೆಲಂಗಾಣದಲ್ಲಿ ಕಾಲೇಜುಗಳ ಬಂದ್‌ಗೆ ಕರೆ ನೀಡಿದ್ದರು.







