ಬೆಂಗಳೂರು ಅಭಿವೃದ್ಧಿಗೆ 700 ಕೋಟಿ ರೂ. ಯೋಜನೆ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಜ. 30: ನಗರದ ಸಂಚಾರ ದಟ್ಟಣೆ ನಿಯಂತ್ರಣ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳಲು ಉದ್ದೇಶಿಸಿರುವ 700 ಕೋಟಿ ರೂ. ವೆಚ್ಚದ ಯೋಜನೆಗಳು ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣವಾಗಿದ್ದು, ಫೆ.25ರೊಳಗೆ ಈ ಯೋಜನೆಗಳಿಗೆ ಕಾರ್ಯಾದೇಶ ನೀಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಗರದ ರಸ್ತೆಗಳ ಸುಧಾರಣೆ ವಿಚಾರದಲ್ಲಿ ಸದಾ ಜಾಗೃತರಾಗಿದ್ದು, ಇನ್ವೆಸ್ಟ್-ಕರ್ನಾಟಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಆರೋಪ ನಿರಾಧಾರ ಎಂದರು.
ನಾನು ನಗರದ ಎಲ್ಲ ಕಡೆ ಸಂಚಾರ ಮಾಡಿದ್ದು, ಕಳಪೆ ರಸ್ತೆ ಕಂಡ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದು, ಎಲ್ಲ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಕೆ.ಜೆ.ಜಾರ್ಜ್, ರಸ್ತೆಗಳ ಸುಧಾರಣೆ ವೇಳೆ ಗುಣಮಟ್ಟದ ನಿಯಂತ್ರಣಕ್ಕೂ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಸ್ಪಷ್ಟನೆೆ: ಎಲ್ಲರಿಗೂ ಅವರದ್ದೆ ಆದ ಕೆಲಸ-ಕಾರ್ಯಗಳಿದ್ದು, ಎಲ್ಲರನ್ನೂ ನಾನು ಗೌರವಿಸುವೆ. ನಮಗೆ ರಿಸಪ್ಷನಿಸ್ಟ್ ಕೂಡ ಮುಖ್ಯ. ನಾನು ಯಾರನ್ನೂ ಕಡೆಗಣಿಸಿ ಮಾತನಾಡಿಲ್ಲ. ಸಾಮಾನ್ಯವಾಗಿ ಸಭೆಯಲ್ಲಿ ಇರುವ ಸಂದರ್ಭ ದಲ್ಲಿ ಮೊಬೈಲ್ ಕರೆ ಸ್ವೀಕರಿಸುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಸಂದೇಶ ರವಾನಿಸಿದರೆ ಅದಕ್ಕೆ ಪ್ರತಿಕ್ರಿಯಿಸುವೆ ಎಂದು ಅವರು ಸ್ಪಷ್ಟನೆ ನೀಡಿದರು.
ನಗರದ ಅಭಿವೃದ್ಧಿಗೆ ಜನ ಸಾಮಾನ್ಯರ ತೆರಿಗೆ ಹಣವನ್ನು ಸದ್ಬಳಕೆ ಮಾಡ ಲಾಗುತ್ತಿದೆ. ಅಲ್ಲದೆ, ಪಾರದರ್ಶಕತೆಯಿಂದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದ ಅವರು, ಸಾರ್ವಜನಿಕರ ಹಣವನ್ನು ಅತ್ಯಂತ ಎಚ್ಚರಿಕೆಯಿಂದ ಜನತೆ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗುವುದು ಎಂದು ಹೇಳಿದರು.







