ಶ್ರೀಲಂಕಾದಲ್ಲಿ ಜನಪರ ಸಿನೆಮಾಗಳಿಗೆ ನಿರ್ಬಂಧ: ನಿರ್ದೇಶಕ ಪ್ರಸನ್ನ ವಿತನಘೆ

ಬೆಂಗಳೂರು, ಜ.30: ಶ್ರೀಲಂಕಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹರಣವಾಗುತ್ತಿದ್ದು, ಜನಪರ ಆಶಯಗಳನ್ನೊಳಗೊಂಡ ಸಿನೆಮಾಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇಲ್ಲವಾಗಿದೆ ಎಂದು ಶ್ರೀಲಂಕಾದ ಸಾಕ್ಷಚಿತ್ರ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.
ಶನಿವಾರ ವಾರ್ತಾಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡಮಿ ನಗರದ ಒರಾಯನ್ ಮಾಲ್‌ನಲ್ಲಿ ಆಯೋಜಿ ಸಿರುವ 8ನೆ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಭಾಗವ ಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ಸಿನೆಮಾ ತಯಾರಿಸಿರುವುದು ದೊಡ್ಡ ಸಾಹಸದ ಕೆಲಸವೆಂದು ತಿಳಿಸಿದರು.
2015ರಲ್ಲಿ ‘ಸೈಲೆನ್ಸ್ ಇನ್ ದಿ ಕೋರ್ಟ್’ ಸಾಕ್ಷ ಚಿತ್ರವನ್ನು ಹಲವು ಸಂಕಷ್ಟಗಳ ನಡುವೆ ತಯಾರಿಸಿದ್ದೇನೆ. ಶ್ರೀಲಂಕಾದ ನ್ಯಾಯಾಂಗ ವ್ಯವಸ್ಥೆಯ ಜನವಿರೋಧಿ ನೀತಿ ಹಾಗೂ ಇದಕ್ಕೆ ಪೂರಕವಾಗಿ ಶ್ರೀಲಂಕಾದ ಆಡಳಿತ ವರ್ಗ ಜನತೆಯ ಮೇಲೆ ನಡೆಸುತ್ತಿರುವ ದೌರ್ಜನ್ಯಗಳನ್ನು ಸಾಕ್ಷಚಿತ್ರವಾಗಿಸಿದ್ದೇನೆಂದು ಅವರು ತಿಳಿಸಿದರು. ‘ಸೈಲೆನ್ಸ್ ಇನ್ ದಿ ಕೋರ್ಟ್’ ಸಾಕ್ಷ ಚಿತ್ರ ನಿರ್ದೇಶಿಸಿದ ನಂತರ ಶ್ರೀಲಂಕಾ ಸರಕಾರದಿಂದ ಬೆದರಿಕೆಗಳು ಶುರುವಾಗಿವೆ. ಸರಕಾರದ ಜನವಿರೋಧಿ ನೀತಿಗಳ ವಿರುದ್ಧವಾಗಿ ಹೋರಾಟ ಮಾಡುವವರನ್ನು ದಮನಿಸುವಂತಹ ಕೆಲಸ ನಡೆಯುತ್ತಿದೆ. ಅದರಲ್ಲೂ ಸಿನೆಮಾ ನಿರ್ದೇಶಕರು ಸದಾ ಪ್ರಾಣಾಪಾಯದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಭಾರತದಲ್ಲಿ ಸಿನೆಮಾ ಕ್ಷೇತ್ರಕ್ಕೆ ಮುಕ್ತ ಅವಕಾಶವಿದೆ. ಹೀಗಾಗಿ ನನ್ನ ಚಿತ್ರಗಳ ಎಡಿಟಿಂಗ್ ಸೇರಿದಂತೆ ಎಲ್ಲ ತರಹದ ತಾಂತ್ರಿಕ ಕೆಲಸಗಳು ಭಾರತದಲ್ಲೇ ನಡೆಸುತ್ತೇನೆ. ಏಷ್ಯಾದ ಸಿನೆಮಾ ನಿರ್ದೇಶಕರಿಗೆ ಹಾಗೂ ತಂತ್ರಜ್ಞರಿಗೆ ಭಾರತ ಒಳ್ಳೆಯ ಅವಕಾಶವನ್ನು ನೀಡುತ್ತಿದೆ ಎಂದು ಅವರು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನರಹರಿರಾವ್ ಉಪಸ್ಥಿತರಿದ್ದರು.





