ಕೋಲ್ಕತಾ : ಕಾಮಧುನಿ ಸಾಮೂಹಿಕ ಅತ್ಯಾಚಾರ ಪ್ರಕರಣ - ಮೂವರಿಗೆ ಮರಣದಂಡನೆ,ಮೂವರಿಗೆ ಜೀವಾವಧಿ ಶಿಕ್ಷೆ

ಕೋಲ್ಕತಾ,ಜ.30: ಪ.ಬಂಗಾಳದಾದ್ಯಂತ ಆಕ್ರೋಶ ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕವನ್ನು ಸೃಷ್ಟಿಸಿದ್ದ 2013ರ ಕಾಮಧುನಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಇಲ್ಲಿಯ ಹೆಚ್ಚುವರಿ ನಗರ ಮತ್ತು ಸೆಷನ್ಸ್ ನ್ಯಾಯಾಲಯವು ಶನಿವಾರ ಮರಣ ದಂಡನೆಯನ್ನು ಘೋಷಿಸಿದೆ. ಇತರ ಮೂವರಿಗೆ ಸಾಯುವವರೆಗೂ ಜೈಲು ಶಿಕ್ಷೆಯನ್ನು ವಿಧಿಸಲಾಗಿದ್ದು,ಇಬ್ಬರು ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದಾಗಿ ಬಿಡುಗಡೆಗೊಳಿಸಿದೆ.
ಸೈಫುಲ್ ಅಲಿ,ಅನ್ಸಾರ್ ಅಲಿ ಮತ್ತು ಅಮೀನುಲ್ ಅಲಿ ಮರಣ ದಂಡನೆಗೊಳಗಾಗಿದ್ದರೆ, ಇಮಾನುಲ್ ಇಸ್ಲಾಮ್,ಅಮೀನುಲ್ ಇಸ್ಲಾಮ್ ಮತ್ತು ಭೋಲಾ ನಾಸ್ಕರ್ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ರಫೀಕುಲ್ ಇಸ್ಲಾಮ್ ಮತ್ತು ನೂರ್ ಅಲಿ ಶಿಕ್ಷೆಯಿಂದ ಪಾರಾಗಿದ್ದಾರೆ.
ಉತ್ತರ 24-ಪರಗಣಗಳ ಜಿಲ್ಲೆಯ ಕಾಮಧುನಿ ನಿವಾಸಿ,21ರ ಹರೆಯದ ಯುವತಿ 2013,ಜೂ.7ರಂದು ಕಾಲೇಜಿನಲ್ಲಿ ಪರೀಕ್ಷೆ ಬರೆದು ತನ್ನ ಮನೆಗೆ ಮರಳುತ್ತಿದ್ದಾಗ ನಿರ್ಜನ ರಸ್ತೆಯಲ್ಲಿ ಆಕೆಯನ್ನು ಬಲಾತ್ಕಾರದಿಂದ ಪಕ್ಕದ ಹೊಲಕ್ಕೆ ಎಳೆದೊಯ್ದಿದ್ದ ಪಾತಕಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಆಕೆಯನ್ನು ಕ್ರೂರವಾಗಿ ಕೊಂದು ಪರಾರಿಯಾಗಿದ್ದರು.





